ಬೆಂಗಳೂರು: ಹಲವು ತೊಡಕುಗಳನ್ನು ಮೀರಿ ಚಂದ್ರಯಾನ–3 ಯೋಜನೆಯ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ. ಈ ಮೂಲಕ ದಕ್ಷಿಣ ಧ್ರುವದಲ್ಲಿ ಅಡಿ ಇಟ್ಟ ವಿಶ್ವದ ಮೊದಲ ಮತ್ತು ಏಕೈಕ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ.
ಸೆಪ್ಟೆಂಬರ್ 2019ರಲ್ಲಿ ಚಂದ್ರಯಾನ–2ರ ಲ್ಯಾಂಡರ್ ಹಾರ್ಡ್ ಲ್ಯಾಂಡಿಂಗ್ ಆದ ಬಳಿಕ ಮತ್ತೊಂದು ಮಿಷನ್‌ಗೆ ಪಟ್ಟ ಶ್ರಮದ ಬಗ್ಗೆ ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಎನ್‌ಡಿಟಿವಿ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಚಂದ್ರಯಾನ–2 ಹಾರ್ಡ್ ಲ್ಯಾಂಡಿಂಗ್ ಆದ ಕಾರಣ ಯಾವುದೇ ಉಪಕರಣ ನಮಗೆ ಸಿಗಲಿಲ್ಲ. ಹಾಗಾಗಿ, ಎಲ್ಲವನ್ನೂ ಹೊಸದಾಗಿ ಸಿದ್ಧಪಡಿಸಬೇಕಾಯಿತು ಎಂದಿದ್ದಾರೆ.
‘ಚಂದ್ರಯಾನ–2ರಲ್ಲಿ ಆದ ತಪ್ಪುಗಳ ಕುರಿತಂತೆ ಮೊದಲ ವರ್ಷ ಪರಿಶೀಲನೆ ನಡೆಸಿದೆವು. ಬಳಿಕ, ಎಲ್ಲ ಪ್ರಕ್ರಿಯೆಗಳನ್ನು ಮತ್ತೆ ನಡೆಸಲಾಯಿತು. ಕಳೆದ 2 ವರ್ಷ ನಾವು ಚಂದ್ರಯಾನ–3 ಪರೀಕ್ಷೆ ನಡೆಸಿದೆವು’ಎಂದು ಅವರು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕವು ಇಸ್ರೊ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿತು. ಕೋವಿಡ್ ನಂತರದ ದಿನಗಳಲ್ಲಿ ನಾವು ಸುಧಾರಿಸಿಕೊಂಡಿದ್ದು, ಕೆಲ ರಾಕೆಟ್‌ಗಳ ಉಡಾವಣೆ ಮಾಡಿದ್ದೇವೆ ಎಂದು ತಿಳಿಸಿದರು.
ಚಂದ್ರಯಾನ–3 ಅತ್ಯಂತ ವಿಶಿಷ್ಟವಾದುದ್ದಾಗಿದ್ದು, ಬೇರೆ ಯಾವುದೇ ಗಗನನೌಕೆ ಮಾಡಲಾಗದ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಅನ್ನು ಮಾಡಿ ತೋರಿಸಿದೆ. ಈ ಹಿಂದಿನ ಮಿಷನ್‌ಗಳಲ್ಲಿ ಗುರಿಯಾಗಿಸಿಕೊಂಡಿದ್ದ ಸಮಭಾಜಕ ರೇಖೆಯಿಂದ ದಕ್ಷಿಣ ಧ್ರುವ ಬಹಳ ದೂರದಲ್ಲಿದೆ. ಚಂದ್ರನ ಅಂಗಳದಲ್ಲಿ ಮಂಜುಗಡ್ಡೆ ರೂಪದಲ್ಲಿ ನೀರಿನ ಇರುವಿಕೆ ಕುರಿತಂತೆ ಈ ಸಂಶೋಧನೆ ಬೆಳಕು ಚೆಲ್ಲಲಿದೆ.
ಮುಂದಿನ 14 ದಿನಗಳ ಕಾಲ 6 ಚಕ್ರಗಳ ರೋವರ್, ಚಂದ್ರನ ಅಂಗಳದಲ್ಲಿ ಸಂಶೋಧನೆಗಳನ್ನು ನಡೆಸಲಿದೆ. ವಿಕ್ರಮ್ ಲ್ಯಾಂಡರ್ ಮತ್ತು ರೋವರ್ ಪ್ರಗ್ಯಾನ್ 1 ಚಂದ್ರ ದಿನದ(ಭೂಮಿಯಲ್ಲಿ 14ದಿನಕ್ಕೆ ಸಮ) ಆಯಸ್ಸು ಹೊಂದಿದೆ. ಲ್ಯಾಂಡರ್ ಮಾಡ್ಯೂಲ್ ನಿರ್ದಿಷ್ಟ ಕೆಲಸಗಳಿಗಾಗಿ 5 ಉಪಕರಣಗಳನ್ನು ಒಳಗೊಂಡಿದೆ ಎಂದು ಸೋಮನಾಥ್ ಹೇಳಿದ್ದಾರೆ.
'ಚಂದ್ರಯಾನ-3ರ ಎಲ್ಲ ಉಪಕರಣಗಳನ್ನು ಚಂದ್ರನಲ್ಲಿ ಸ್ಥಾಪಿಸಲಾಗುತ್ತದೆ. ದಕ್ಷಿಣ ಧ್ರುವದಲ್ಲಿ ಬೃಹತ್ ಪ್ರಮಾಣದ ವೈಜ್ಞಾನಿಕ ಸಾಧ್ಯತೆಗಳಿವೆ. ಅವು ಚಂದ್ರನ ಮೇಲೆ ನೀರು ಮತ್ತು ಖನಿಜಗಳ ಉಪಸ್ಥಿತಿಗೆ ಸಂಬಂಧಿಸಿವೆ’ ಎಂದು ಚಂದ್ರನ ದಕ್ಷಿಣ ಧ್ರುವವನ್ನು ಏಕೆ ಆರಿಸಿದ್ದೀರಿ ಎಂಬ ಪ್ರಶ್ನೆಗೆ ಸೋಮನಾಥ್ ಉತ್ತರಿಸಿದರು.
‘ವಿಜ್ಞಾನಿಗಳು ಅನ್ವೇಷಿಸಲು ಬಯಸಿರುವ ಅನೇಕ ಇತರ ಭೌತಿಕ ಅಂಶಗಳಿವೆ. ನಮ್ಮ ಐದು ಉಪಕರಣಗಳು ಆ ಪ್ರದೇಶಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿವೆ’ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.