ತಿರುಪತಿ: ಚಂದ್ರಯಾನ–3 ಉಡಾವಣಾ ಪೂರ್ವಾಭ್ಯಾಸವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೊ) ಮಂಗಳವಾರ ಪೂರ್ಣಗೊಳಿಸಿದೆ. ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ–3ಉಡಾವಣೆಯಾಗಲಿದೆ.
‘ಚಂದ್ರಯಾನ–3ಮಿಷನ್: 24 ಗಂಟೆಗಳ ಕಾಲ ಸಂಪೂರ್ಣ ಉಡಾವಣಾ ತಯಾರಿ ಮತ್ತು ಪ್ರಕ್ರಿಯೆಯನ್ನು ಅನುಕರಿಸುವ 'ಉಡಾವಣಾ ಪೂರ್ವಾಭ್ಯಾಸ' ಮುಕ್ತಾಯಗೊಂಡಿದೆ’ಎಂದು ಇಸ್ರೊ ಟ್ವೀಟ್ ಮಾಡಿದೆ.
ಇಸ್ರೊ ಜುಲೈ 5ರಂದು ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ-3 ಅನ್ನು ಉಡಾವಣಾ ವಾಹನದೊಂದಿಗೆ ಸಂಯೋಜಿಸುವ ಕಾರ್ಯ ಪೂರ್ಣಗೊಳಿಸಿತ್ತು
ಚಂದ್ರಯಾನ–3 ಯೋಜನೆ ಚಂದ್ರಯಾನ–2ರ ಮುಂದುವರಿದ ಭಾಗವಾಗಿದ್ದು, ಚಂದ್ರನ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸುವುದು ಮತ್ತು ರೋವರ್ ಸಂಚರಿಸುವ ಸಾಮರ್ಥ್ಯ ಪ್ರದರ್ಶಿಸಬೇಕಾಗಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.
ಚಂದ್ರಯಾನ-3 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಉಡಾವಣೆ ಮಾಡಲಾಗುವುದು.
ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುವುದು.
‘ಚಂದ್ರನ ವಿಜ್ಞಾನ’ ವಿಷಯವನ್ನು ಆಧರಿಸಿ ವೈಜ್ಞಾನಿಕ ಉಪಕರಣಗಳನ್ನು ಲ್ಯಾಂಡರ್ ಮತ್ತು ರೋವರ್‌ಗಳಿಗೆ ಅಳವಡಿಸಲಾಗುವುದು. ಅಲ್ಲದೇ, ಸ್ಪೆಕ್ಟ್ರೊ–ಪೊಲಾರಿಮೆಟ್ರಿ ಎಂಬ ಸಾಧನವನ್ನೂ ಅಳವಡಿಸಲಾಗುವುದು. ಇದರ ಮೂಲಕ ಭೂಮಿಯಿಂದ ಹೊಮ್ಮುವ ಬೆಳಕಿನ ಧ್ರುವೀಕರಣವನ್ನು ಚಂದ್ರನ ಕಕ್ಷೆಯಿಂದಲೇ ಅಧ್ಯಯನ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.