ತಿರುವನಂತಪುರ: ಇಸ್ರೊ ಬೇಹುಗಾರಿಕೆ ಪ್ರಕರಣದಡಿ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಮತ್ತು ಮಾಲ್ಡೀವ್ಸ್‌ನ ಇಬ್ಬರು ಪ್ರಜೆಗಳ ಅಕ್ರಮ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್‌ಗೆ ನ್ಯಾಯಾಲಯವುಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಕೃಷ್ಭಕುಮಾರ್ ಅವರು ಮ್ಯಾಥ್ಯೂಸ್‌ಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಇದನ್ನು ಮ್ಯಾಥ್ಯೂಸ್ ಪರ ವಕೀಲ ವಿ. ಅಜಕುಮಾರ್ ಮತ್ತು ಮಾಲ್ಡೀವ್ಸ್‌ನ ಇಬ್ಬರು ಪ್ರಜೆಗಳ ಪರ ವಕೀಲ ಪ್ರಸಾದ್ ಗಾಂಧಿ ಅವರು ದೃಢಪಡಿಸಿದ್ದಾರೆ.
ಮ್ಯಾಥ್ಯೂಸ್‌ಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ನಾರಾಯಣನ್ ಮತ್ತು ಮಾಲ್ಡೀವ್ಸ್ ಇಬ್ಬರು ಪ್ರಜೆಗಳು ವಿರೋಧ ವ್ಯಕ್ತಪಡಿಸಿದ್ದರು.
1994ರ ಇಸ್ರೊ ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಮತ್ತು ಮಾಲ್ಡೀವ್ಸ್‌ನ ಇಬ್ಬರು ಪ್ರಜೆಗಳನ್ನು ಬಂಧಿಸಲಾಗಿತ್ತು. ಈ ಸಂಬಂಧ ಗುಪ್ತಚರ ಇಲಾಖೆಯ (ಐಬಿ) ಅಧಿಕಾರಿಗಳು ಸೇರಿದಂತೆ 17 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
ಇತ್ತೀಚಿಗೆ ಕೇರಳ ಹೈಕೋರ್ಟ್ ಈ ಪ್ರಕರಣ ಸಂಬಂಧ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಮತ್ತು ನಿವೃತ್ತ ಐಬಿ ಅಧಿಕಾರಿಯೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು.
ಬೇಹುಗಾರಿಕೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಗೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಿಬಿಐಗೆ ನೀಡುವಂತೆ ಸುಪ್ರೀಂಕೋರ್ಟ್ ಏಪ್ರಿಲ್ 15ರಂದು ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.