ADVERTISEMENT

ಶುಕ್ರನಲ್ಲಿಗೆ ನೌಕೆ, ಚಂದ್ರನ ಕಪ್ಪು ಪ್ರದೇಶದ ಸಂಶೋಧನೆ; ಇಸ್ರೊ ಮುಂದಿನ ಯೋಜನೆ

ಪಿಟಿಐ
Published 6 ನವೆಂಬರ್ 2022, 15:47 IST
Last Updated 6 ನವೆಂಬರ್ 2022, 15:47 IST
ಇಸ್ರೊ ಲೋಗೊ
ಇಸ್ರೊ ಲೋಗೊ   

ಡೆಹ್ರಾಡೂನ್‌:ಮಂಗಳಯಾನ ಮತ್ತು ಚಂದ್ರಯಾನ ಕೈಗೊಂಡ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ದೃಷ್ಟಿಯನ್ನು ಶುಕ್ರನೆಡೆಗೆ ನೆಟ್ಟಿದೆ. ಜೊತೆಗೆ, ಜಪಾನ್‌ ಸಹಯೋಗದೊಂದಿಗೆ ಚಂದ್ರನ ಶಾಶ್ವತ ಕಪ್ಪು ಭಾಗವನ್ನೂ ಸಂಶೋಧಿಸಲು ಚಿಂತನೆ ನಡೆಸಿದೆ.

ಇಲ್ಲಿ ನಡೆದ ‘ಆಕಾಶ್‌ ತತ್ವಾ’ ಸಮ್ಮೇಳನದಲ್ಲಿ ಅಹಮದಾಬಾದ್‌ ಮೂಲದ ಭೌತ ವಿಜ್ಞಾನ ಸಂಶೋಧನಾ ಪ್ರಯೋಗಾಲಯದ(ಪಿಆರ್‌ಎಲ್‌) ನಿರ್ದೇಶಕ ಅನಿಲ್‌ ಭಾರದ್ವಾಜ್‌ ಅವರು ಇಸ್ರೊದ ಮುಂದಿನ ಯೋಜನೆಗಳ ಕುರಿತು ವಿಷಯ ಮಂಡಿಸಿದರು. ಮಂಗಳ ಗ್ರಹಕ್ಕೂ ಪುನಃ ಉಪಗ್ರಹ ಕಳಿಸುವ ಯೋಜನೆ ಇಸ್ರೊಗೆ ಇದೆ ಎಂದು ಅವರು ಹೇಳಿದರು.

ಚಂದ್ರನಲ್ಲಿರುವ ಶಾಶ್ವತ ನೆರಳಿನಂಥ ಪ್ರದೇಶದ ಕುರಿತು ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಲೂನಾರ್‌ ರೋವರ್‌ (ಚಂದ್ರನ ಮೇಲ್ಮೈ ಅನ್ವೇಷಣೆಗೆ ಅನುಕೂಲವಾಗುವಂತೆ ಅಭಿವೃದ್ಧಿಗೊಳಿಸಲಾಗಿರುವ ಬಾಹ್ಯಾಕಾಶ ಪರಿಶೋಧನಾ ವಾಹನ) ಉಡಾವಣೆ ಮಾಡುವಂತೆ ಜಪಾನ್‌ನ ಜಪಾನೀಸ್‌ ಏರೊಸ್ಪೇಸ್‌ ಎಕ್ಸ್‌ಪ್ಲೊರೇಷನ್‌ ಏಜನ್ಸಿ (ಜೆಎಎಕ್ಸ್‌ಎ) ಜೊತೆ ಮಾತುಕತೆ ನಡೆಯುತ್ತಿದೆ. ಪ್ರಾಥಮಿಕ ಯೋಜನೆಗಳ ಪ್ರಕಾರ, ಇಸ್ರೊ ಅಭಿವೃದ್ಧಿಪಡಿಸಿರುವ ಲೂನಾರ್‌ ರೋವರ್‌ರನ್ನು ಜಪಾನ್‌ನ ರಾಕೆಟ್‌ ಬಳಸಿ ಚಂದ್ರನ ದಕ್ಷಿಣ ಧ್ರುವಕ್ಕೆ ಕಳಿಸಲಾಗುವುದು. ನಂತರ ಸೂರ್ಯನ ಕಿರಣವೇ ಬೀಳದ ಶಾಶ್ವತ ನೆರಳಿನಂಥ ಪ್ರದೇಶಕ್ಕೆ ರೋವರ್‌ ಚಲಿಸಲಿದೆ ಎಂದು ಅವರು ತಿಳಿಸಿದರು.

ADVERTISEMENT

ಮುಂದಿನ ವರ್ಷವೇ ಆದಿತ್ಯ ಎಲ್‌–1 ಉಡ್ಡಯನ: ಸೂರ್ಯನಲ್ಲಿಗೆ ಕಳಿಸಲಾಗುತ್ತಿರುವ 400 ಕೆ.ಜಿ. ತೂಕದ ಉಪಗ್ರಹ ಆದಿತ್ಯ ಎಲ್‌–1 ಕುರಿತು ಇದೇ ವೇಳೆ ಮಾಹಿತಿ ನೀಡಿದ ಅವರು, ಸೂರ್ಯನ ಕಕ್ಷೆ ಸುತ್ತ ಸುತ್ತುವ ಈ ಉಪಗ್ರಹವು ಲಾಗ್ರೇಂಜ್‌ ಪಾಯಿಂಟ್‌ ಎಲ್‌–1 ಎಂಬ ಬಿಂದುವಿಂದ ಸೂರ್ಯನ ಅಧ್ಯಯನ ನಡೆಸಲಿದೆ ಎಂದು ಹೇಳಿದರು.

ಆದಿತ್ಯ–ಎಲ್‌1 ಮತ್ತು ಚಂದ್ರಯಾನ–3 ಯೋಜನೆಗಳನ್ನು ಮುಂದಿನ ವರ್ಷವೇ ಕೈಗೊಳ್ಳಲಾಗುವುದು. ಬಳಿಕವೇ ಶುಕ್ರನಲ್ಲಿಗೆ ನೌಕೆ ಕಳಿಸುವ ಮತ್ತು ಜೆಎಎಕ್ಸ್‌ಎ ಜೊತೆಸೇರಿ ಚಂದ್ರನಲ್ಲಿಗೆ ನೌಕೆ ಕಳಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.