ರಾಕೆಟ್ ಮತ್ತು ಉಪಗ್ರಹ ಉಡಾವಣೆಯ ‘ಪರೀಕ್ಷಾರ್ಥ ಹಾರಾಟದ ದತ್ತಾಂಶ’ಗಳನ್ನು ಮಾರಿಕೊಂಡಿದ್ದಾರೆ ಎನ್ನುವ ಆರೋಪದ ಮಸಿ ಬಳಿಸಿಕೊಂಡಿದ್ದ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ಕೇರಳ ಸರ್ಕಾರದಿಂದ 1.3 ಕೋಟಿ ರೂಪಾಯಿ ಪರಿಹಾರ ದೊರೆತಿದೆ. ಆರೋಪ ಮುಕ್ತವಾಗಿ ಪರಿಹಾರ ದೊರಕಿರುವುದೇನೊ ಸರಿ; ಆದರೆ, ಇಪ್ಪತ್ತೈದು ವರ್ಷಗಳ ಕಾಲ ದೇಶದ್ರೋಹದ ಆರೋಪ ಎದುರಿಸಿ ಅನುಭವಿಸಿದ ಅವರ ನೋವುಗಳಿಗೆ ಪರಿಹಾರ ಕೊಡಲು ಸಾಧ್ಯವೇ?
ಕೇರಳ ಸಚಿವ ಸಂಪುಟ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ 1.3 ಕೋಟಿ ರೂಪಾಯಿ ಪರಿಹಾರ ನೀಡಲು ಕಳೆದ ಡಿ.27ರಂದು ತಾತ್ವಿಕ ಒಪ್ಪಿಗೆ ನೀಡಿತು. ಆ ಮೂಲಕ ಈ ಶತಮಾನ ಶುರುವಾಗುವ ಮೊದಲು ಆರಂಭವಾದ ಅನ್ಯಾಯ ಪರಂಪರೆಗೆ ಎರಡನೇ ದಶಕ ಮುಗಿಯುವ ಮೊದಲು ಇತಿಶ್ರೀ ಹಾಕುವ ಪ್ರಯತ್ನಕ್ಕೆ ಅಸ್ತು ಎಂದಿದೆ. ಅಷ್ಟು ಮಾತ್ರವೇ ಅಲ್ಲ, ಕೇರಳ ಸಚಿವ ಸಂಪುಟದ ಈ ನಿರ್ಧಾರ ದೇಶದ ಅಪರಾಧ ಶಾಸ್ತ್ರ ಮತ್ತು ಕಾನೂನು ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆಯುವ ಪ್ರಯತ್ನದಂತೆಯೂ ಇದೆ.
ನಂಬಿಕೆದ್ರೋಹಿ, ದೇಶದ್ರೋಹಿ ಎಂಬೆಲ್ಲಾ ಬಿರುದುಗಳ ಭಾರಕ್ಕೆ ಹೈರಾಣಾಗಿ ನ್ಯಾಯಕ್ಕಾಗಿ ಹೋರಾಡಿದ ವಿಜ್ಞಾನಿಗೆ ಪರಿಹಾರದ ಮೊತ್ತಕ್ಕಿಂತಲೂ ತನ್ನ ಮೇಲೆ ಸಲ್ಲದ ಆರೋಪ ಹೊರಿಸಿದ ಸರ್ಕಾರ ಈಗ ಎಲ್ಲ ಆರೋಪಗಳನ್ನು ಹಿಂಪಡೆದು, ಮಾಡಿದ ತಪ್ಪು ಒಪ್ಪಿಕೊಂಡು, ದೊಡ್ಡಮೊತ್ತದ ಪರಿಹಾರ ನೀಡಲು ಮುಂದಾಗಿರುವುದು ನೆಮ್ಮದಿ ತಂದಿರಬಹುದು.
ನಂಬಿ ನಾರಾಯಣನ್ ಅವರ ಆತ್ಮಚರಿತ್ರೆಯ ಹೆಸರು ‘ಓರ್ಮಗಳುಡೆ ಭ್ರಮಣಪಥಂ’ (ನೆನಪಿನ ಸುರುಳಿ). 23ನೇ ಅಕ್ಟೋಬರ್ 2017ರಲ್ಲಿ ಬಿಡುಗಡೆಯಾದ ಈ ಪುಸ್ತಕದಲ್ಲಿ ನಾರಾಯಣನ್ ತಮ್ಮ ಬದುಕು ಸಾಗಿ ಬಂದ ಹಾದಿಯ ಜೊತೆಜೊತೆಗೆ ದೇಶದ ಹಿತ ಬಯಸಿದ ವಿಜ್ಞಾನಿಯೊಬ್ಬ ಎದುರಿಸಿದ ಸಂದಿಗ್ಧ–ಸಂಕಷ್ಟಗಳನ್ನೂ ಕಟ್ಟಿಕೊಟ್ಟಿದ್ದಾರೆ. ಇದೀಗ ಅವರ ಬದುಕನ್ನೇ ಆಧರಿಸಿದ ಬಯೊಪಿಕ್ ‘ರಾಕೆಟರಿ – ದಿ ನಂಬಿ ಎಫೆಕ್ಟ್’ ತೆರೆಗೆ ಬರುವ ಸಿದ್ಧತೆಯಲ್ಲಿದೆ.
ಯಾರೀ ನಂಬಿ ನಾರಾಯಣನ್? ಈತ ದೇಶಭಕ್ರನೋ? ದೇಶದ್ರೋಹಿಯೋ? ವಾಮಮಾರ್ಗದಿಂದ ಖ್ಯಾತಿಗಳಿಸಿದ ಕಳ್ಳ ವಿಜ್ಞಾನಿಯೋ? ಪ್ರತಿಭೆ–ಪರಿಶ್ರಮದಿಂದ ದೇಶದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ವೇಗವರ್ಧಕವಾಗಿ ಕೆಲಸ ಮಾಡಿದ ಸಾಧಕನೋ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮುಂದಿನ ಸಾಲುಗಳಲ್ಲಿದೆ.
ಇದನ್ನೂ ಓದಿ:ಕ್ರಯೊಜೆನಿಕ್ಗೆ ಮುನ್ನುಡಿ ಬರೆದ ನಂಬಿ ನಾರಾಯಣನ್
ಸಾರಾಭಾಯ್ ಕಣ್ಣಿಗೆ ಬಿದ್ದ ಸೂಕ್ಷ್ಮಮತಿ
ತಮಿಳುನಾಡಿನ ನಾಗರ್‌ಕೊಯಿಲ್ (ಜನನ: ಡಿಸೆಂಬರ್ 12, 1941) ನಂಬಿ ನಾರಾಯಣನ್ ಅವರ ಹುಟ್ಟೂರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂಬಿ, 1966ರಲ್ಲಿ ಮೊದಲ ಬಾರಿಗೆ ತಿರುವನಂತಪುರದಲ್ಲಿ ಅಂದಿನ ಇಸ್ರೊ ಅಧ್ಯಕ್ಷ ವಿಕ್ರಮ್ ಸಾರಾಭಾಯ್ ಅವರನ್ನು ಭೇಟಿಯಾಗಿದ್ದರು. ಅವರ ಬಾಹ್ಯಾಕಾಶದ ಕನಸಿಗೆ ಬೀಜ ಬಿತ್ತಿದ್ದ ಇಸ್ರೊ ಮತ್ತು ತಿರುವನಂತಪುರ ಅವರ ಬದುಕಿನೊಳಗೆ ಪ್ರವೇಶಿಸಿದ್ದು ಹೀಗೆ. ಆದರೆ ಕೊನೆಗೆ ಇದೇ ತಿರುವನಂತಪುರ ಅವರ ಬದುಕಿನ ಕಾಲೆಳೆದು ಬೀಳಿಸಿದ್ದು ಮಾತ್ರ ವಿಪರ್ಯಾಸ.
ಆ ದಿನಗಳಲ್ಲಿ ಸಾಕಷ್ಟು ಓದಿಕೊಂಡ ಬುದ್ಧಿವಂತರಿಗೆ ಮಾತ್ರ ಇಸ್ರೊದಲ್ಲಿ ಕೆಲಸ ಸಿಗುತ್ತಿತ್ತು. ಇದನ್ನು ತಿಳಿದೇ ನಂಬಿ, ತಿರುವನಂತಪುರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂ.ಟೆಕ್. ಓದಲು ಸೇರಿಕೊಂಡರು. ಹುಡುಗನ ಆಸಕ್ತಿ ಗಮನಿಸಿದ ಸಾರಾಭಾಯ್ ಖುದ್ದು ಆಸ್ಥೆ ವಹಿಸಿ ಅಮೆರಿಕಗೆ ಓದಲು ಕಳಿಸಿದರು. ನಾಸಾ ಫೆಲೊಶಿಪ್‌ನೊಂದಿಗೆ ಪ್ರಿನ್‌ಸ್ಟನ್ ವಿಶ್ವವಿದ್ಯಾಲಯಕ್ಕೆ 1969ರಲ್ಲಿ ಪ್ರವೇಶ ಪಡೆದ ನಾರಾಯಣನ್, ರಾಸಾಯನಿಕ ರಾಕೆಟ್ ಪ್ರೊಪಲ್ಷನ್ ತಂತ್ರಜ್ಞಾನದಲ್ಲಿ ಪ್ರೊ.ಲುಗಿ ಕ್ರೊಕೊ ಮಾರ್ಗದರ್ಶನದಲ್ಲಿ ಕೇವಲ 10 ತಿಂಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದು ಸಹ ಒಂದು ದಾಖಲೆ! ರಾಕೆಟ್ ತಂತ್ರಜ್ಞಾನದಲ್ಲಿ ಅವರಿಗಿದ್ದ ಆಳವಾದ ಜ್ಞಾನದಿಂದಾಗಿ ಅಮೆರಿಕದಲ್ಲಿ ಹತ್ತಾರು ಕೆಲಸಗಳು ಹುಡುಕಿಬಂದವು. ಆದರೆ ದೇಶಪ್ರೇಮ ಮತ್ತು ವಿಕ್ರಮ್ ಸಾರಾಭಾಯ್ ಅವರ ಪ್ರಭಾವ ನಂಬಿ ನಾರಾಯಣನ್ ಅವರನ್ನು ಭಾರತಕ್ಕೆ ಕರೆತಂದಿತು.
ಈ ಮೂಲಕ ರಾಕೆಟ್ ಉಡಾವಣೆಗೆ ಘನ ಇಂಧನ ಆಧರಿತ ತಂತ್ರಜ್ಞಾನವನ್ನೇ ಅವಲಂಬಿಸಿದ್ದ ಭಾರತದ ಬಾಹ್ಯಾಕಾಶ ಜಗತ್ತಿಗೆ 70ರ ದಶಕದಲ್ಲಿ ದ್ರವ ಇಂಧನ ಬಳಸಿ ರಾಕೆಟ್ ಉಡಾಯಿಸುವ ಕಸುವು ತುಂಬುವ ತಂತ್ರಜ್ಞನೊಬ್ಬನ ಪ್ರವೇಶವಾಗಿತ್ತು. ಅಂದಿನ ಇಸ್ರೊ ಅಧ್ಯಕ್ಷ ಸತೀಶ್ ಧವನ್ ದ್ರವ ಇಂಧನ ಎಂಜಿನ್‌ಗಳ ಅಗತ್ಯ ಗಮನಿಸಿ ನಂಬಿ ಅವರ ಪ್ರಯೋಗಗಳನ್ನು ಪ್ರೋತ್ಸಾಹಿಸಿದರು. ಯು.ಆರ್. ರಾವ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಂಬಿ, ದ್ರವ ಪ್ರೊಪೆಲೆಂಟ್ ಮೋಟರ್‌ಗಳನ್ನು ಅಭಿವೃದ್ಧಿಪಡಿಸಿದರು.
1992ರಲ್ಲಿ ಭಾರತ ಎರಡು ಕ್ರಯೊಜನಿಕ್ ಎಂಜಿನ್ ಖರೀದಿಗಾಗಿ ರಷ್ಯಾ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಅಮೆರಿಕ ಅಡ್ಡಗಾಲಿನಿಂದ ಎಂಜಿನ್‌ಗಳು ಭಾರತಕ್ಕೆ ಬರಲಿಲ್ಲ. ಈ ಏಕಸ್ವಾಮ್ಯಕ್ಕೆ ತಡೆಯೊಡ್ಡಲು ಇಸ್ರೊ ಸ್ವದೇಶದಲ್ಲಿಯೇ ನಾಲ್ಕು ಎಂಜಿನ್‌ಗಳ ತಯಾರಿಕೆಗೆ ಮುಂದಾಯಿತು. ಕೇರಳ ಸರ್ಕಾರದ ಅಧೀನದಲ್ಲಿದ್ದ ಕೇರಳ ಹೈಟೆಕ್ ಇಂಡಸ್ಟ್ರೀಸ್ (ಈಗಿನ ಬ್ರಹ್ಮೋಸ್ ಏರೊಸ್ಪೇಸ್ ತ್ರಿವೇಂಡ್ರಂ ಲಿ) ಸಂಸ್ಥೆಯ ಸಹಯೋಗದಲ್ಲಿ ಇನ್ನೇನು ಇದು ಕಾರ್ಯರೂಪಕ್ಕೆ ಬರಬೇಕು ಎನ್ನುವ ಹಂತದಲ್ಲಿ (1994) ಗೂಢಚರ್ಯೆ ಪ್ರಕರಣ ಬೆಳಕಿಗೆ ಬಂದು ಈ ಪ್ರಯತ್ನ ಮಣ್ಣುಗೂಡಿತು.
ಹಾಗೆಂದು ಇಸ್ರೊಗೆ ನಂಬಿ ನಾರಾಯಣನ್ ಕೊಡುಗೆ ಏನೂ ಇಲ್ಲವೇ? ಖಂಡಿತ ಇದೆ. 2008ರಲ್ಲಿ ನಭಕ್ಕೆ ನೆಗೆದ ‘ಚಂದ್ರಯಾನ-1’ರ ಉಪಗ್ರಹ ಹೊತ್ತಿದ್ದ ಜಿಎಸ್‌ಎಲ್‌ವಿ ರಾಕೆಟ್‌ಗೆ ಶಕ್ತಿ ತುಂಬಿದ್ದ ‘ವಿಕಾಸ್’ ಎಂಜಿನ್ ಅಭಿವೃದ್ಧಿಪಡಿಸಿದ್ದ ತಂಡಕ್ಕೆ ಇವರೇ ನೇತೃತ್ವ ವಹಿಸಿದ್ದರು.
ದೇಶದ್ರೋಹದ ಆರೋಪ
ದೇಶದ ಬಜೆಟ್‌ನಲ್ಲಿ ಕೋಟ್ಯಂತರ ರೂಪಾಯಿ ಪಡೆಯುವ ಇಸ್ರೊ ಮೇಲೆ ಜನರು ಇರಿಸಿದ್ದ ನಂಬಿಕೆ ಅಲುಗಾಡಿಸಿದ ಪ್ರಕರಣ ಬೆಳಕಿಗೆ ಬಂದಿದ್ದು 1994ರಲ್ಲಿ. ಮಾಲ್ಡೀವ್ಸ್ ಗೂಢಚರ್ಯೆ ಸಂಸ್ಥೆಯ ಅಧಿಕಾರಿಗಳಾದ ಮರಿಯಂ ರಶೀದಾ ಮತ್ತು ಫೌಜಿಯಾ ಹಸನ್ ಅವರಿಗೆ ಅತಿಸೂಕ್ಷ್ಮ ರಕ್ಷಣಾ ದಾಖಲೆಗಳನ್ನು ಹಸ್ತಾಂತರಿಸಿದ ಆರೋಪದ ಮೇಲೆ ನಾರಾಯಣನ್ ಮತ್ತು ಅವರ ಸಹವರ್ತಿ ಎಂಜಿನಿಯರ್ ಡಿ.ಶಶಿಕುಮಾರನ್ ಅವರನ್ನು ಕೇರಳ ಪೊಲೀಸರು ಬಂಧಿಸಿದರು. ರಾಕೆಟ್ ಮತ್ತು ಉಪಗ್ರಹ ಉಡಾವಣೆಯ ‘ಪರೀಕ್ಷಾರ್ಥ ಹಾರಾಟದ ದತ್ತಾಂಶ’ಗಳನ್ನು ಇವರು ಮಾರಿಕೊಂಡಿದ್ದಾರೆ ಎನ್ನುವ ಆರೋಪ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ನಾರಾಯಣನ್ ಮನೆಯಲ್ಲಿ ಅದನ್ನು ಸಾಬೀತುಪಡಿಸುವ ಪುರಾವೆ ಸಿಕ್ಕಿರಲಿಲ್ಲ.
ಕೇರಳ ಪೊಲೀಸರು ನಾರಾಯಣನ್ ಅವರನ್ನು ಬಂಧಿಸಿ 48 ದಿನಗಳ ಕಾಲ ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು. ವಿಚಾರಣೆ ನೆಪದಲ್ಲಿ ಥರ್ಡ್ ಡಿಗ್ರಿ ಪ್ರಯೋಗಗಳು (ಪೊಲೀಸ್ ಹಿಂಸೆ) ನಡೆದವು. ಈ ಸಂದರ್ಭ ಇಸ್ರೊದ ಉನ್ನತ ಅಧಿಕಾರಿಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡುವಂತೆ ತನಿಖಾ ದಳದ (ಐಬಿ) ಅಧಿಕಾರಿಗಳು ಒತ್ತಾಯಿಸಿದರು. ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕ ಎ.ಇ.ಮುತುನಾಗಂ ಅವರ ಮೇಲೆ ಗಂಭೀರ ಆರೋಪ ಬರುವಂಥದ್ದನ್ನು ನಂಬಿ ನಾರಾಯಣನ್ ಏನಾದರೂ ಹೇಳಬೇಕು ಎನ್ನುವುದು ತನಿಖಾಧಿಕಾರಿಗಳ ನಿರೀಕ್ಷೆಯಾಗಿತ್ತು. ಸುಳ್ಳು ಆರೋಪ ಮಾಡಲು ಒಪ್ಪದಿದ್ದಾಗ ನಂಬಿ ಅವರನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದರು. ಕುಸಿದು ಬಿದ್ದಾಗ ಆಸ್ಪತ್ರೆಗೆ ಸೇರಿಸಿದರು. ಈ ಅವಧಿಯಲ್ಲಿ ಇಸ್ರೊ ನನ್ನ ನೆರವಿಗೆ ಬರಲಿಲ್ಲ ಎನ್ನುವುದು ನಂಬಿ ಅವರನ್ನು ಇಂದಿಗೂ ಕಾಡುವ ಅಸಮಾಧಾನ.
‘ಕಾನೂನು ಸಂಘರ್ಷದಲ್ಲಿ ಇಸ್ರೊ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ’ ಎನ್ನುವುದು ಆಗ ಇಸ್ರೊ ಅಧ್ಯಕ್ಷರಾಗಿದ್ದ ಕಸ್ತೂರಿ ರಂಗನ್ ಅವರ ನಿಲುವಾಗಿತ್ತು. ಮುಂದಿನ ದಿನಗಳಲ್ಲಿ ತನಿಖೆ ಸಿಬಿಐಗೆ ವರ್ಗಾವಣೆಯಾಯಿತು. ಕೇರಳ ಪೊಲೀಸರು ಹೊರಿಸಿದ್ದ ಆರೋಪಗಳು ಆಧಾರರಹಿತ ಎಂದು ಸಿಬಿಐ ಸ್ಪಷ್ಟವಾಗಿ ತಳ್ಳಿಹಾಕಿತು. ಸುಪ್ರೀಂ ಕೋರ್ಟ್ ಸಹ 1998ರ ಏಪ್ರಿಲ್‌ನಲ್ಲಿ ಸಿಬಿಐ ಅಭಿಪ್ರಾಯವನ್ನೇ ಎತ್ತಿಹಿಡಿಯಿತು. ಇಬ್ಬರು ವಿಜ್ಞಾನಿಗಳ ಭವಿಷ್ಯ ಹಾಳು ಮಾಡಿದಿರಿ ಎಂದು ‘ರಾಷ್ಟ್ರೀಯ ಮಾನವ ಹಕ್ಕು ಆಯೋಗ’ ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಿತು. ಆರೋಪ ಮುಕ್ತರಾದ ಮೇಲೆ ನಂಬಿ ನಾರಾಯಣನ್‌ಗೆ ಇಸ್ರೊ ಬೇರೊಂದು ಕೆಲಸ ಕೊಟ್ಟು ತಿರುವನಂತಪುರದಿಂದ ವರ್ಗಾವಣೆ ಮಾಡಿತು. 2001ರಲ್ಲಿ ಅವರು ನಿವೃತ್ತರಾದರು.
ನ್ಯಾಯಕ್ಕಾಗಿ ಹೋರಾಟ
ನ.7, 2013ರಲ್ಲಿ ನಾರಾಯಣನ್ ಮಾಧ್ಯಮದ ಎದುರು ಬಂದು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲು ಕಾರಣವಾದ ಷಡ್ಯಂತ್ರದ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ವಿಸ್ತೃತ ತನಿಖೆ ನಡೆಸಲು 2018ರ ಸೆಪ್ಟೆಂಬರ್ 14ರಂದು ನಿವೃತ್ತ ನ್ಯಾಯಮೂರ್ತಿಯೊಬ್ಬರ ಅಧ್ಯಕ್ಷತೆಯಲ್ಲಿ ಸುಪ್ರೀಂ ಕೋರ್ಟ್ ಮೂವರು ಸದಸ್ಯರ ತನಿಖಾ ಆಯೋಗ ರಚಿಸಿತು. ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಸುಪ್ರೀಂ ಕೋರ್ಟ್ ನ್ಯಾಯಪೀಠ ನಾರಾಯಣನ್ ಅವರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿತು.
ಇದೇ ವರ್ಷ ಜನವರಿಯಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದ ಸಾಧನೆಗಾಗಿ ಭಾರತ ಸರ್ಕಾರವು ದೇಶದ ಮೂರನೇ ಅತ್ಯುನ್ನತ ಗೌರವ ಎನಿಸಿದ ಪದ್ಮಭೂಷಣ ನೀಡಿದ ಗೌರವಿಸಿದ ನಂತರವೇ ನಂಬಿ ನಾರಾಯಣನ್ ಅವರಿಗೆ ತಮಗೆ ನ್ಯಾಯ ಸಿಕ್ಕಿದ ಭಾವ ಮೂಡಿದ್ದು. ಕೇರಳ ಸರ್ಕಾರವೂ ಇದೀಗ ತನ್ನಿಂದಾದ ತಪ್ಪು ಒಪ್ಪಿಕೊಂಡು 1.3 ಕೋಟಿ ರೂಪಾಯಿ ಪರಿಹಾರ ನೀಡುವ ಐತಿಹಾಸಿಕ ನಿರ್ಣಯ ಪ್ರಕಟಿಸಿದೆ.
ದೇಶದ್ರೋಹದ ಆರೋಪ ಹೊತ್ತ ಸುಮಾರು 25 ವರ್ಷಗಳ ನಂತರ ನಾರಾಯಣನ್ ಸಂಪೂರ್ಣ ದೋಷಮುಕ್ತ ಎಂದು ಕೇಂದ್ರ–ಕೇರಳ ಸರ್ಕಾರಗಳು ಒಪ್ಪಿಕೊಂಡಿವೆ. ಆದರೆ ಈ ಅವಧಿಯಲ್ಲಿ ಪ್ರತಿಭಾವಂತ ವಿಜ್ಞಾನಿಯೊಬ್ಬರ ಸೃಜನಶೀಲ ಮನಸ್ಸು ಯಾವುದೇ ಜಂಜಡಗಳಿಲ್ಲದೆ ಮುಕ್ತವಾಗಿದ್ದಿದ್ದರೆ ದೇಶದ ಬಾಹ್ಯಾಕಾಶ ಸಾಧನೆ ಎಷ್ಟೆಲ್ಲಾ ಮುಂದಡಿ ಇಟ್ಟಿರುತ್ತಿತ್ತು? ನಂಬಿ ನಾರಾಯಣನ್ ಅವರಿಗೆ ಚಿತ್ರಹಿಂಸೆ ಕೊಡುವಂತೆ ಮಾಡುವ ಮೂಲಕ ಸೇಡು ತೀರಿಸಿಕೊಂಡವರು ಯಾರು? ತನಗೆ ಸೆಡ್ಡು ಹೊಡೆದು ಕ್ರಯೊಜನಿಕ್ ತಂತ್ರಜ್ಞಾನ ರೂಪಿಸಲು ಮುಂದಾದ ಭಾರತದ ಮೇಲೆ ಅಮೆರಿಕ ತನ್ನ ಗುಪ್ತಚರ ಸಂಸ್ಥೆ ಸಿಐಎ ಏಜೆಂಟರ ಮೂಲಕ ಇಂಥದ್ದೊಂದು ಷಡ್ಯಂತ್ರ ರೂಪಿಸಿತ್ತೆ?
ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.
(ಕೃಪೆ:ಸುಧಾ, ಜನವರಿ 16, 2020)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.