ಬೆಂಗಳೂರು: ಮುಂದಿನ ಆರು ತಿಂಗಳ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೊ) ಸೂರ್ಯ ಮತ್ತು ಚಂದ್ರನ ಅಂಗಳಕ್ಕೆ ಎರಡು ಆಳವಾದ ಬಾಹ್ಯಾಕಾಶ ಶೋಧಕಗಳನ್ನು ಕಳುಹಿಸಲಿದೆ.
ಈ ಎರಡೂ ಆಕಾಶಕಾಯಗಳ ಮೇಲಿನ ಕೆಲವು ದೀರ್ಘಕಾಲೀನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
‘ಸೂರ್ಯನ ಬಗೆಗಿನ ಸಂಶೋಧನೆಯ ಆದಿತ್ಯ-ಎಲ್ 1 ಮಿಷನ್‌ನ ಉಡಾವಣೆ ಫೆಬ್ರುವರಿ 2023ಕ್ಕೆ ಆಗಲಿದೆ. ಆದರೆ, ಇದು ನಿರ್ಣಾಯಕ ಉಡಾವಣೆಯಲ್ಲ. ಮತ್ತೊಂದೆಡೆ ಚಂದ್ರಯಾನ-3 ಅನ್ನು ಜೂನ್‌ನಲ್ಲಿ ಯೋಜಿಸಲಾಗಿದೆ. ಚಂದ್ರನತ್ತ ಹೊರಡುವ ಬಾಹ್ಯಾಕಾಶ ನೌಕೆ ಸಿದ್ಧವಾಗಿದೆ ಮತ್ತು ನಾವು ಅದನ್ನು ಹೆಚ್ಚು ದೃಢಗೊಳಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ
2019ರಲ್ಲಿ ಉಡಾಯಿಸಲಾಗಿದ್ದ ಚಂದ್ರಯಾನ-2 ಸಾಧಿಸಲು ಆಗದಿದ್ದನ್ನು ಚಂದ್ರಯಾನ-3 ಮಿಷನ್ ಸಾಧಿಸುವ ಗುರಿ ಹೊಂದಿದೆ. ಸಾಫ್ಟ್‌ವೇರ್ ದೋಷದಿಂದಾಗಿ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿದ ಕಾರಣ ಭಾರತದ ಚಂದ್ರಯಾನ–2 ಮಿಷನ್ ವಿಫಲವಾಗಿತ್ತು.
ಈಗ ಹೊಸ ಲ್ಯಾಂಡರ್ ಅನ್ನು ಲ್ಯಾಂಡಿಂಗ್ ಸಮಯದಲ್ಲಿ ಯಾವುದೇ ಅಪಘಾತವಾಗದಂತೆ ಸಿದ್ಧಪಡಿಸಲಾಗಿದೆ. ಲ್ಯಾಂಡಿಂಗ್ ಸಮಯದಲ್ಲಿ ಮೇಲ್ಮೈ ದೂರವನ್ನು ಲೆಕ್ಕಾಚಾರ ಮಾಡಲು ಹೊಸ ಸಾಫ್ಟ್‌ವೇರ್ ಇದೆ ಮತ್ತು ಉಪಕರಣವನ್ನು ಸುಧಾರಿಸಲಾಗಿದೆ. ಇದರಿಂದ ಒಂದು ಉಪಕರಣವು ವಿಫಲವಾದರೆ, ಇನ್ನೊಂದು ಉಪಕರಣ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದರು.
‘ಚಂದ್ರಯಾನ–3 ಸಿದ್ಧವಾಗಿದೆ. ರೋವರ್ ಇದೆ. ಎಂಜಿನಿಯರಿಂಗ್ ಗಮನಾರ್ಹವಾಗಿ ವಿಭಿನ್ನವಾಗಿದೆ. ಕಳೆದ ಬಾರಿಯಂತೆ ಸಮಸ್ಯೆಯಾಗದಂತೆ ಇನ್ನಷ್ಟು ಗಟ್ಟಿಗೊಳಿಸಿದ್ದೇವೆ’ಎಂದರು.
ಪ್ರಸ್ತುತ 2024 ರ ಅಂತ್ಯದ ವೇಳೆಗೆ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿರುವ ಬಹುನಿರೀಕ್ಷಿತ ಮಾನವ ಬಾಹ್ಯಾಕಾಶ ಯಾನಕ್ಕೂ ಮೊದಲು, ಬಾಹ್ಯಾಕಾಶ ಸಂಸ್ಥೆ ನಾಲ್ಕು ಅಬಾರ್ಟ್ ಮಿಷನ್‌ಗಳು ಸೇರಿದಂತೆ ಆರು ಮಾನವರಹಿತ ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ ಎಂದು ಸೋಮನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.