ADVERTISEMENT

ಹಿಮಾಲಯದ ಸರೋವರಗಳ ಮೇಲೆ ನಿಗಾ ವಹಿಸಲಿದೆ ಇಸ್ರೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2023, 5:40 IST
Last Updated 11 ಅಕ್ಟೋಬರ್ 2023, 5:40 IST
ಇಸ್ರೊ
ಇಸ್ರೊ    

ನವದೆಹಲಿ: ಚಂದ್ರನ ದಕ್ಷಿಣ ಧ್ರುವದ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಸುದ್ದಿಯಾಗಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಇದೀಗ ಹೊಸ ಕೆಲಸಕ್ಕೆ ಕೈಜೋಡಿಸಿದೆ.

ಈಶಾನ್ಯ ರಾಜ್ಯದ ದಕ್ಷಿಣ ಹ್ಲೋನಕ್ ಸರೋವರವನ್ನು ಉಪಗ್ರಹಗಳ ಮೂಲಕ ನಿರಂತರವಾಗಿ ನಿಗಾ ಇಡುವುದು ಮತ್ತು ಯಾವುದೇ ಅಸಹಜ ಬದಲಾವಣೆಗಳ ಬಗ್ಗೆ ಅಧಿಕಾರಿಗಳಿಗೆ ಮುನ್ಸೂಚನೆ ನೀಡುವಂತೆ ಇಸ್ರೊಗೆ ಮನವಿ ಮಾಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಸಿಕ್ಕಿಂ ಮೂಲತಃ ನೇಪಾಳ ಮತ್ತು ಭೂತಾನ್ ನಡುವೆ ಸುತ್ತುವರಿದ ಪರ್ವತಗಳ ರಾಜ್ಯವಾಗಿದೆ. ಕಳೆದ ವಾರ ಉತ್ತರ ಸಿಕ್ಕಿಂನ ಹ್ಲೋನಕ್ ಸರೋವರದ ಮೇಲೆ ಮೇಘಸ್ಫೋಟದಿಂದ ತೀಸ್ತಾ ನದಿ ‌ಜಲಾನಯನ ಪ್ರದೇಶದಲ್ಲಿ ಹಠಾತ್‌ ಪ್ರವಾಹ ಉಂಟಾಗಿ ಸೇನಾ ಸಿಬ್ಬಂದಿ ಸೇರಿದಂತೆ 82 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.

ADVERTISEMENT

ನೀರ್ಗಲ್ಲು ಸರೋವರದಲ್ಲಿ ಉಂಟಾದ ಪ್ರವಾಹದಿಂದ ತೀಸ್ತಾ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಮುಖ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಈವರೆಗೂ 2,011 ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದಾಗಿ 87 ಸಾವಿರ ಜನರು ಬಾಧಿತರಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಎಸ್‌ಡಿಎಂಎ) ಪ್ರಕಟಣೆ ತಿಳಿಸಿದೆ.

ಚುಂಗ್‌ತಾಂಗ್‌, ಲಾಚುಂಗ್ ಮತ್ತು ಲಾಚೆನ್‌ನಲ್ಲಿ 3,000ಕ್ಕೂ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ವಾಯುಪಡೆ ಹೆಲಿಕಾಪ್ಟರ್‌ಗಳ ಮೂಲಕ ಏರ್‌ ಲಿಫ್ಟ್‌ ಮಾಡಲಾಗುತ್ತಿದೆ. ಈ ವರ್ಷದ ಮಳೆಗಾಲದಲ್ಲಿ ದೇಶದಲ್ಲಿ ಸುಮಾರು 2,500 ಜನರು ಪ್ರವಾಹ, ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಪ್ರವಾಹದಿಂದಾಗಿ ರಾಜ್ಯದಲ್ಲಿ 11 ಸೇತುವೆಗಳು ನಾಶವಾಗಿವೆ. ಮಂಗನ್ ಜಿಲ್ಲೆಯೊಂದರಲ್ಲೇ ಎಂಟು ಸೇತುವೆಗಳು ಕೊಚ್ಚಿಹೋಗಿವೆ. ನಾಮ್ಚಿಯಲ್ಲಿ ಎರಡು ಸೇತುವೆಗಳು ಮತ್ತು ಗ್ಯಾಂಗ್ಟಕ್‌ನಲ್ಲಿ ಒಂದು ಸೇತುವೆ ನಾಶವಾಗಿವೆ. ಪ್ರವಾಹ ಪೀಡಿತ ನಾಲ್ಕು ಜಿಲ್ಲೆಗಳಲ್ಲಿ ನೀರಿನ ಪೈಪ್ ಲೈನ್‌ಗಳು, ಒಳಚರಂಡಿ ಮಾರ್ಗಗಳು ಮತ್ತು ಕುಚ್ಚಾ ಹಾಗೂ ಕಾಂಕ್ರೀಟ್ ಎರಡೂ ಸೇರಿ 277 ಮನೆಗಳು ನೆಲಸಮವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.