ಬೆಂಗಳೂರು: ಅನ್ಯಗ್ರಹಗಳಲ್ಲಿ ಮಾನವ ನೆಲೆ ಸ್ಥಾಪಿಸಿಕೊಂಡಾಗ ಎದುರಾಗುವ ಸಮಸ್ಯೆಗಳೇನು, ಗಗನಯಾತ್ರಿಗಳು ಆ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಅನುಭವವನ್ನು ಭೂಮಿಯಲ್ಲೇ ಪಡೆಯಲು ಲಡಾಖ್‌ನ ಲೇಹ್‌ನಲ್ಲಿ ನೆಲೆಯೊಂದನ್ನು ಇಸ್ರೊ ಸ್ಥಾಪಿಸಿದೆ.
‘ಅನಲಾಗ್ ಸ್ಪೇಸ್ ಮಿಷನ್’ ಎಂದು ಕರೆಯಲಾಗುವ ಈ ನೆಲೆ ಶುಕ್ರವಾರ ಕಾರ್ಯಾರಂಭ ಮಾಡಿರುವುದಾಗಿ ಇಸ್ರೊ ‘ಎಕ್ಸ್’ ಮೂಲಕ ತಿಳಿಸಿದೆ.
ಅನ್ಯಗ್ರಹಗಳಿಗೆ ಹೋಗಿ ಅಲ್ಲಿ ನೆಲೆ ಸ್ಥಾಪಿಸಿ ಕಾರ್ಯನಿರ್ವಹಿಸುವಾಗ ಹಲವು ಸವಾಲುಗಳು ಎದುರಾಗುತ್ತವೆ. ಅದರಲ್ಲಿಯೂ ಮುಖ್ಯವಾಗಿ ನಿರ್ಜನತೆ. ಅಂದರೆ ಬೇರೆ ಮಾನವರು ಅಥವಾ ಜೀವಿಗಳು ಸಿಗುವ ಸಾಧ್ಯತೆ ಅಲ್ಲಿ ಇರುವುದಿಲ್ಲ. ಅಲ್ಲಿನ ವಾತಾವರಣವೂ ತೀರಾ ಪ್ರತಿಕೂಲವಾಗಿರುತ್ತದೆ. ಅಲ್ಲಿಗೆ ಒಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗಗನಯಾತ್ರಿಗಳು ಹೋದ ಸಂದರ್ಭದಲ್ಲಿ ನಿರ್ಜನತೆಯ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬ ಪಾಠ ಭೂಮಿಯ ಮೇಲೆ ನೀಡಲಾಗುತ್ತದೆ. ಇದರಿಂದ ಅನ್ಯಗ್ರಹಗಳಿಗೆ ಹೋಗಿ ನೆಲೆ ಸ್ಥಾಪಿಸಿ ವಾತಾವರಣಕ್ಕೆ ಹೊಂದಿಕೊಳ್ಳಲು ಅನುಕೂಲವಾಗುತ್ತದೆ ಎಂದು ಇಸ್ರೊ ಮೂಲಗಳು ತಿಳಿಸಿವೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷ ತುಂಬುವ ವೇಳೆಗೆ ಮಾನವನನ್ನು ಚಂದ್ರ ಮೇಲೆ ಇಳಿಸಿ, ಅಲ್ಲಿ ನೆಲೆಯೊಂದನ್ನು ಸ್ಥಾಪಿಸುವ ಗುರಿಯನ್ನು ಇಸ್ರೊ ಹೊಂದಿದೆ. ಲೇಹ್‌ನ ಅನಲಾಗ್ ಸ್ಪೇಸ್ ಮಿಷನ್ ಇದಕ್ಕೆ ನೆರವಾಗಲಿದೆ. ಲೇಹ್ ಅತ್ಯಂತ ನಿರ್ಜನ ಮತ್ತು ತೀರಾ ಶೀತದಿಂದ ಕೂಡಿದ ಮರುಭೂಮಿಯಾಗಿದೆ. ಅನ್ಯಗ್ರಹಗಳನ್ನು ಹೋಲುವ ವಾತಾವರಣ ಇರುತ್ತದೆ ಎಂದು ಮೂಲಗಳು ಹೇಳಿವೆ.
ಈ ನೆಲೆಯನ್ನು ಇಸ್ರೊದ ಹ್ಯೂಮನ್ ಸ್ಪೇಸ್ ಸೆಂಟರ್, ಎಎಕೆಎ ಸ್ಪೇಸ್ ಸ್ಟುಡಿಯೊ, ಲಡಾಖ್ ವಿಶ್ವವಿದ್ಯಾಲಯ, ಐಐಟಿ ಬಾಂಬೆ, ಲಡಾಖ್ ಸ್ವಾಯತ್ತ ಗಿರಿ ಅಭಿವೃದ್ಧಿ ಮಂಡಳಿ ಸೇರಿ ಸ್ಥಾಪಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.