ADVERTISEMENT

ಸ್ಪೇಸ್‌ ಎಕ್ಸ್‌ನ ರಾಕೆಟ್‌ ಬಳಸಿ ಉಪಗ್ರಹ ಉಡ್ಡಯನಕ್ಕೆ ಇಸ್ರೊ ಸಜ್ಜು

ಪಿಟಿಐ
Published 3 ಜನವರಿ 2024, 15:32 IST
Last Updated 3 ಜನವರಿ 2024, 15:32 IST
ಸ್ಪೇಸ್‌ಎಕ್ಸ್‌ನ ಫಾಲ್ಕನ್‌–9 ರಾಕೆಟ್ –ಎಪಿ/ಪಿಟಿಐ ಚಿತ್ರ
ಸ್ಪೇಸ್‌ಎಕ್ಸ್‌ನ ಫಾಲ್ಕನ್‌–9 ರಾಕೆಟ್ –ಎಪಿ/ಪಿಟಿಐ ಚಿತ್ರ   

ನವದೆಹಲಿ: ಇಸ್ರೊದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್‌), ಸ್ಪೇಸ್‌ ಎಕ್ಸ್‌ನ ‘ಫಾಲ್ಕನ್–9’ ರಾಕೆಟ್‌ನ ನೆರವಿನಿಂದ ಸಂವಹನ ಉದ್ದೇಶದ ಉಪಗ್ರಹವನ್ನು ಉಡ್ಡಯನ ಮಾಡಲಿದೆ.  

ದೇಶದ ಬ್ರಾಡ್‌ಬ್ಯಾಂಡ್ , ವಿಮಾನ ಮತ್ತು ನೌಕೆಗಳಲ್ಲಿ ಸಂವಹನ (ಐಎಫ್‌ಎಂಸಿ) ಹಾಗೂ ಸೆಲ್ಯುಲರ್ ಸೇವೆಗಳನ್ನು ಒದಗಿಸುವ ‘ಜಿಎಸ್‌ಎಟಿ–20’ ಉಪಗ್ರಹವನ್ನು ವರ್ಷದ ಮಧ್ಯಭಾಗದಲ್ಲಿ ಉಡ್ಡಯನ ಮಾಡಲಾಗುತ್ತದೆ. ಇದಕ್ಕಾಗಿ ಅಮೆರಿಕದ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ  ಎನ್‌ಎಸ್‌ಐಎಲ್‌ ಬುಧವಾರ ಪ್ರಕಟಿಸಿದೆ. 

4.7 ಟನ್‌ ಭಾರದ ಈ ‘ಜಿಎಸ್‌ಎಟಿ–20’ ಉಪಗ್ರಹವು ಅಧಿಕ ಸಂವಹನ ಸಾಮರ್ಥ್ಯವನ್ನು ಹೊಂದಿರಲಿದ್ದು, ಇದರಿಂದ  ದೇಶದಾದ್ಯಂತವಲ್ಲದೇ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ಲಕ್ಷದ್ವೀಪಕ್ಕೂ ಸೇವೆ ವಿಸ್ತರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.

ADVERTISEMENT

ಇಸ್ರೊ ಬಳಿ ಇರುವ ‘ಜಿಎಸ್‌ಎಲ್‌ವಿ–ಎಂಕೆ3’ ರಾಕೆಟ್‌ನಿಂದ 4 ಟನ್‌ ಭಾರದ ಉಪಗ್ರಹಗಳನ್ನು ಭೂ ಕಕ್ಷೆಗೆ ಸೇರಿಸಬಹುದಾಗಿದೆ. ಹೀಗಾಗಿ ‘ಜಿಎಸ್‌ಎಟಿ–20’ ಉಪಗ್ರಹ ಉಡ್ಡಯನಕ್ಕೆ ಸ್ಪೇಸ್‌ ಎಕ್ಸ್‌ನ ಅಧಿಕ ಸಾಮರ್ಥ್ಯದ ‘ಫಾಲ್ಕನ್‌–9’ ರಾಕೆಟ್‌ ಬಳಸಲಾಗುತ್ತದೆ.

‘ಫಾಲ್ಕನ್‌–9’ ರಾಕೆಟ್‌, 8.3 ಟನ್‌ನಷ್ಟು ಭಾರದ ಸಾಧನಗಳನ್ನು ಹೊತ್ತೊಯ್ದು, ಭೂಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ.

10 ಟನ್‌ ಭಾರದ ಸಾಧನಗಳನ್ನು ಸಹ ಉಡ್ಡಯನ ಮಾಡುವ ಸಾಮರ್ಥ್ಯವಿರುವ ‘ನೆಕ್ಟ್ಸ್‌ ಜನರೇಷನ್ ಲಾಂಚ್‌ ವೆಹಿಕಲ್‌’ (ಎನ್‌ಜಿಎಲ್‌ವಿ) ರಾಕೆಟ್‌ ಅನ್ನು ಇಸ್ರೊ ಅಭಿವೃದ್ಧಿಪಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.