ನವದೆಹಲಿ: ಮಹಾರಾಷ್ಟ್ರ ಮೂಲದ ಸ್ಟಾರ್ಟ್ಅಪ್ ಕಂಪನಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ವೇಳೆ, ₹ 224 ಕೋಟಿ ಕಪ್ಪುಹಣ ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಭಾನುವಾರ ತಿಳಿಸಿದೆ.
ಮಹಾರಾಷ್ಟ್ರದ ಪುಣೆ, ಠಾಣೆ ನಗರ ಹಾಗೂ ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ 23 ಸ್ಥಳಗಳಲ್ಲಿ ಮಾರ್ಚ್ 9ರಂದು ಶೋಧ ಕಾರ್ಯ ಕೈಗೊಳ್ಳಲಾಗಿತ್ತು ಎಂದು ಮಂಡಳಿ ತಿಳಿಸಿದೆ.
‘ಲೆಕ್ಕಪತ್ರ ಇಲ್ಲದ ₹ 1 ಕೋಟಿ ನಗದು ಹಾಗೂ ₹ 22 ಲಕ್ಷ ಮೌಲ್ಯದ ಆಭರಣಗಳನ್ನು ಈ ವರೆಗೆ ಜಪ್ತಿ ಮಾಡಲಾಗಿದೆ’ ಎದು ಸಿಬಿಡಿಟಿ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
ಈ ಸ್ಟಾರ್ಟ್‌ಅಪ್ ಕಂಪನಿಯು ಕಟ್ಟಡ ನಿರ್ಮಾಣ ಸಾಮಗ್ರಿಗಳ ಚಿಲ್ಲರೆ ಮಾರಾಟದಲ್ಲಿ ನಿರತವಾಗಿದ್ದು, ₹ 6 ಸಾವಿರ ಕೋಟಿಗೂ ಅಧಿಕ ವಾರ್ಷಿಕ ವಹಿವಾಟು ಹೊಂದಿದೆ ಎಂದೂ ತಿಳಿಸಿದೆ.
‘ಲೆಕ್ಕಪತ್ರವೇ ಇಲ್ಲದ ವೆಚ್ಚ ಸೇರಿದಂತೆ ₹ 400 ಕೋಟಿಗೂ ಅಧಿಕ ಅವ್ಯವಹಾರ ಕಂಡುಬಂದಿದೆ. ಕಂಪನಿಯು ಮಾರಿಷಸ್ ಮಾರ್ಗವಾಗಿ ಹರಿದುಬಂದ ಭಾರಿ ಮೊತ್ತದ ವಿದೇಶಿ ಹೂಡಿಕೆಯನ್ನು ಸ್ವೀಕರಿಸಿರುವುದು ಸಹ ಶೋಧದ ವೇಳೆ ಪತ್ತೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.