ADVERTISEMENT

ದೆಹಲಿ ಸಚಿವ ಗೆಹ್ಲೋಟ್‌ ನಿವಾಸದ ಮೇಲೆ ಐಟಿ ದಾಳಿ

ಪಿಟಿಐ
Published 10 ಅಕ್ಟೋಬರ್ 2018, 19:37 IST
Last Updated 10 ಅಕ್ಟೋಬರ್ 2018, 19:37 IST
ಕೈಲಾಶ್‌ ಗೆಹ್ಲೋಟ್‌
ಕೈಲಾಶ್‌ ಗೆಹ್ಲೋಟ್‌   

ನವದೆಹಲಿ (ಪಿಟಿಐ):ತೆರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಸಾರಿಗೆ ಸಚಿವ ಹಾಗೂ ಆಮ್‌ ಆದ್ಮಿ ಪಾರ್ಟಿಯ (ಎಎಪಿ) ಮುಖಂಡ ಕೈಲಾಶ್‌ ಗೆಹ್ಲೋಟ್‌ ಅವರ ಒಡೆತನದ ಕಂಪನಿಗಳು ಹಾಗೂ ನಿವಾಸಗಳಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ.

ದೆಹಲಿಯ ವಸಂತ ಕುಂಜ್‌, ಡಿಫೆನ್ಸ್‌ ಕಾಲೊನಿಯ ನಿವಾಸಗಳು, ಪಶ್ಚಿಮ ವಿಹಾರದಲ್ಲಿರುವ ಕಚೇರಿ ಮತ್ತು ನಿವಾಸಗಳು, ನಜಾಫಗಢ್‌, ಲಕ್ಷ್ಮೀ ನಗರ, ಪಾಲಂ ವಿಹಾರ್‌ ಹಾಗೂ ಗುರುಗ್ರಾಮದಲ್ಲಿರುವ ಗೆಹ್ಲೋಟ್‌ ಒಡೆತನದ ಕಚೇರಿಗಳು ಸೇರಿ ಒಟ್ಟು 16 ಕಡೆಗಳಲ್ಲಿ ಶೋಧ ನಡೆಸಲಾಗಿದೆ. ಆದಾಯ ತೆರಿಗೆ ಇಲಾಖೆಯ 60 ಮಂದಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್‌ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

ಗೆಹ್ಲೋಟ್‌ ಕುಟುಂಬದವರು ನಡೆಸುವಬ್ರಿಸ್ಕ್ ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಡೆವಲಪರ್ಸ್‌ ಪ್ರೈವೇಟ್ ಲಿಮಿಟೆಡ್ ಹಾಗೂ ಕಾರ್ಪೊರೇಟ್ ಇಂಟರ್‌ನ್ಯಾಷನಲ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್ ಮೇಲೆ ದಾಳಿ ನಡೆದಿದೆ. ಈ ಎರಡೂ ಕಂಪನಿಗಳು ತೆರಿಗೆ ವಂಚಿಸಿದ್ದರಿಂದ ದಾಳಿ ನಡೆಸಲಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಗೆಹ್ಲೋಟ್‌ ಅವರು ಸಾರಿಗೆ, ಕಾನೂನು ಮತ್ತು ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಜಾಫಗಢ್‌ ವಿಧಾನಸಭಾ ಕ್ಷೇತ್ರದಿಂದ ಇವರು ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.