ADVERTISEMENT

ವ್ಯವಸ್ಥೆಯ ಬಗ್ಗೆ ಟೀಕೆ ಸುಲಭ, ಸುಧಾರಣೆ ಕಷ್ಟ: ನ್ಯಾ. ದೀಪಕ್ ಮಿಶ್ರಾ

ನ್ಯಾಯಮೂರ್ತಿಗಳ ಬಂಡಾಯ: ಮೌನ ಮುರಿದ ಸಿಜೆಐ

ಪಿಟಿಐ
Published 15 ಆಗಸ್ಟ್ 2018, 17:13 IST
Last Updated 15 ಆಗಸ್ಟ್ 2018, 17:13 IST
ದೀಪಕ್‌ ಮಿಶ್ರಾ
ದೀಪಕ್‌ ಮಿಶ್ರಾ   

ನವದೆಹಲಿ: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಬಹಿರಂಗ ಬಂಡಾಯ ಸಾರಿದ ಎಂಟು ತಿಂಗಳ ನಂತರ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮೌನ ಮುರಿದಿದ್ದಾರೆ.

‘ವ್ಯವಸ್ಥೆಯನ್ನು ಟೀಕಿಸುವುದು, ಅದರ ವಿರುದ್ಧ ವಾಗ್ದಾಳಿ ನಡೆಸುವುದು ಮತ್ತು ನಾಶ ಮಾಡುವುದು ತುಂಬಾ ಸುಲಭದ ಕೆಲಸ. ಆದರೆ, ಅದನ್ನು ಸರಿದಾರಿಗೆ ತರುವುದು ಸವಾಲಿನ ಕೆಲಸ’ ಎಂದು ಅವರು ಪರೋಕ್ಷವಾಗಿ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

‘ವ್ಯವಸ್ಥೆಯನ್ನು ಸುಧಾರಿಸುವುದು ಕಠಿಣ ಕೆಲಸ. ವ್ಯವಸ್ಥೆಯ ಸಕಾರಾತ್ಮಕವಾಗಿ ಸುಧಾರಿಸಲು ಬಯಸುವ ಜನರು ತಮ್ಮ ವೈಯಕ್ತಿಕ ಹಿತಾಸಕ್ತಿ ಮತ್ತು ಕುಂದುಕೊರತೆಗಳನ್ನು ಬದಿಗಿರಿಸಬೇಕಾಗುತ್ತದೆ. ಸಕಾರಾತ್ಮಕ ಮನೋಭಾವದಿಂದ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಧ್ವಜಾರೋಹಣದ ನಂತರ ಮಾತನಾಡಿದ ಮಿಶ್ರಾ, ‘ನಮ್ಮ ಕೆಲಸಗಳು ಮಾತನಾಡಬೇಕೆ ಹೊರತು ನಮ್ಮ ಅಬ್ಬರದ ಶಬ್ದಗಳಲ್ಲ’ ಎಂದರು.

ನ್ಯಾಯಾಲಯದ ಒಳಗೆ ಮತ್ತು ಹೊರಗೆ ಕೇಳಿ ಬರುತ್ತಿರುವ ಟೀಕೆಗಳ ಹಿನ್ನೆಲೆಯಲ್ಲಿ ಮಿಶ್ರಾ ಅವರ ಮಾತುಗಳು ಮಹತ್ವ ಪಡೆದುಕೊಂಡಿವೆ.

ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಇದೇ ಜನವರಿಯಲ್ಲಿ ಮಿಶ್ರಾ ವಿರುದ್ಧ ಬಹಿರಂಗವಾಗಿ ಬಂಡಾಯ ಎದ್ದಿದ್ದರು. ಅದಾದ ನಂತರ ಅನೇಕ ವಕೀಲರು ಮುಖ್ಯ ನ್ಯಾಯಮೂರ್ತಿ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

**

ಕೆಲವು ಶಕ್ತಿಗಳು ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದವು. ನಾವೆಲ್ಲರೂ ಆ ಯತ್ನವನ್ನು ವಿಫಲಗೊಳಿಸಿ ನ್ಯಾಯದೇವತೆಯನ್ನು ರಕ್ಷಣೆ ಮಾಡಿದ್ದೇವೆ. ನ್ಯಾಯದೇವತೆ ಕಣ್ಣೀರು ಹಾಕಿದರೆ, ನಾವೆಲ್ಲ ಕಣ್ಣೀರು ಸುರಿಸಬೇಕಾಗುತ್ತದೆ
– ದೀಪಕ್‌ ಮಿಶ್ರಾ,ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.