ನವದೆಹಲಿ: ‘ಹಿಂದಿನ ವರ್ಷಗಳ ತೆರಿಗೆ ಪಾವತಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಪಕ್ಷದ ವಿವಿಧ ಬ್ಯಾಂಕ್ ಖಾತೆಗಳಿಂದ ₹65 ಕೋಟಿಯನ್ನು ಕಡಿತಗೊಳಿಸುವಂತೆ ಪತ್ರ ಬರೆದಿರುವ ಆದಾಯ ತೆರಿಗೆ ಇಲಾಖೆ ಕ್ರಮ ಪ್ರಜಾಸತ್ತಾತ್ಮಕ ನಡೆಯಲ್ಲ’ ಎಂದು ಕಾಂಗ್ರೆಸ್ ಬುಧವಾರ ಆರೋಪ ಮಾಡಿದೆ.
ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ಖಜಾಂಚಿ ಅಜಯ ಮಾಕನ್, ‘ತನಿಖಾ ಸಂಸ್ಥೆಗಳು ವಿಚಾರಣೆಯನ್ನು ಅನಿಯಂತ್ರಿತವಾಗಿ ನಡೆಸುವುದನ್ನು ರೂಢಿ ಮಾಡಿಕೊಂಡಲ್ಲಿ ಪ್ರಜಾಪ್ರಭುತ್ವವೇ ನಾಶವಾದಂತೆ’ ಎಂದು ಆರೋಪಿಸಿದ್ದಾರೆ.
‘ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಕರಣದ ವಿಚಾರಣೆ ಬಾಕಿ ಇರುವಾಗಲೇ, ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್‌ಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ ₹65 ಕೋಟಿ ತೆಗೆಯುವಂತೆ ಆದಾಯ ತೆರಿಗೆ ಇಲಾಖೆ ಪತ್ರ ಬರೆದಿದೆ’ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
‘ಕಾಂಗ್ರೆಸ್‌ನ ಆದಾಯ ತೆರಿಗೆಯಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂದಿದ್ದ ಆದಾಯ ತೆರಿಗೆ ಇಲಾಖೆಯು ₹210 ಕೋಟಿ ವಸೂಲು ಮಾಡಲು ಮುಂದಾಗಿತ್ತು. ಈ ಕುರಿತು ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಕರಣ ದಾಖಲಿಸಲಾಯಿತು. ಇದಕ್ಕೆ ಪ್ರಾಧಿಕಾರವು ತಡೆ ನೀಡಿತ್ತು. ಹೀಗಿದ್ದರೂ ಪಕ್ಷದ ಬ್ಯಾಂಕ್ ಖಾತೆಯಿಂದ ಹಣ ತೆಗೆದಿದ್ದು ಪ್ರಜಾಸತ್ತಾತ್ಮಕವಾದ ನಡೆಯಲ್ಲ’ ಎಂದಿದ್ದಾರೆ.
ಆದಾಯ ತೆರಿಗೆ ಇಲಾಖೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳಿಗೆ ಪತ್ರ ಬರೆದಿರುವ ಕಾಂಗ್ರೆಸ್ ಮುಖಂಡ, ಪ್ರಕರಣ ಐಟಿ ಮೇಲ್ಮನವಿ ಪ್ರಾಧಿಕಾರದಲ್ಲಿ ಇರುವುದರಿಂದ ಹಣವನ್ನು ಯಾವುದೇ ಕಾರಣಕ್ಕೂ ತೆಗೆಯದಂತೆ ಹೇಳಿದ್ದಾರೆ.
‘ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಇರುವ ಭಾರತದಲ್ಲಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಕ್ರಮ ಕೈಗೊಳ್ಳುತ್ತಿರುವುದು ಕಳವಳಕಾರಿ. ಇದನ್ನು ಸರಿಪಡಿಸದಿದ್ದಲ್ಲಿ ಪ್ರಜಾಪ್ರಭುತ್ವಕ್ಕೇ ಅಪಾಯ ಎದುರಾಗಲಿದೆ. ನ್ಯಾಯಾಂಗದ ಮಧ್ಯಪ್ರವೇಶ ಇಲ್ಲವಾದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳೇ ನಾಶವಾಗಲಿವೆ’ ಎಂದು ಮಾಕನ್ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಮೂಲಕ ಸರ್ಕಾರದ ನಡೆ ಅಕ್ರಮ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖಂಡ ರಾಹುಲ್ ಗಾಂಧಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.