ಪೂರ್ವ ಮೇದಿನಿಪುರ(ಪಶ್ಚಿಮ ಬಂಗಾಳ): ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಜೀವ ಉಳಿಸಿಕೊಂಡ ಪಶ್ಚಿಮಬಂಗಾಳದ ಒಂದೇ ಕುಟುಂಬದ ಮೂವರು ನಿಟ್ಟುಸಿರುಬಿಟ್ಟಿದ್ದಾರೆ. ಆ ದೇವರೆ ನಮಗೆ ಎರಡನೇ ಬಾರಿಗೆ ಜೀವದಾನ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಪೂರ್ವ ಮೇದಿನಿಪುರ ಜಿಲ್ಲೆಯ ಮಲುಬಾಸನ್ ಹಳ್ಳಿಯ ಸುಬ್ರೊತೊ ಪಾಲ್, ದೇಬೊಶ್ರೀ ಪಾಲ್ ಮತ್ತು ಅವರ ಮಗು ಅಪಘಾತದಲ್ಲಿ ಬದುಕುಳಿದಿದೆ.
ದಂಪತಿ ತಮ್ಮ ಮಗನಿಗೆ ಚಿಕಿತ್ಸೆ ಕೊಡಿಸಲು ಚೆನ್ನೈನ ವೈದ್ಯರ ಬಳಿಗೆ ಕರೆದೊಯ್ಯುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ರೈಲು ಭೀಕರ ಅಪಘಾತಕ್ಕೆ ಈಡಾಗಿದೆ. ಬದುಕುಳಿದವರಲ್ಲಿ ಒಬ್ಬರಾದ ಸುಬ್ರೊತೊ ಪಾಲ್ ಈ ಕುರಿತಂತೆ ಎಎನ್‌ಐ ಜೊತೆ ವಿವರಿಸಿದ್ದು, ‘ಖರಗ್‌ಪುರ ರೈಲು ನಿಲ್ದಾಣದಿಂದ ನಾವು ನಿನ್ನೆ ಚೆನ್ನೈಗೆ ಹೊರಟಿದ್ದೆವು. ಬಾಲಸೋರ್ ನಿಲ್ದಾಣ ಬಿಡುತ್ತಿದ್ದಂತೆ ರೈಲು ನಡುಗಲು ಆರಂಭಿಸಿತು. ಬೋಗಿಯಲ್ಲಿ ಸಂಪೂರ್ಣ ಹೊಗೆ ತುಂಬಿಕೊಂಡಿತು. ಯಾರನ್ನೂ ನೋಡಲು ಸಾಧ್ಯವಾಗಲಿಲ್ಲ. ಸ್ಥಳೀಯರು ನಮ್ಮ ನೆರವಿಗೆ ಧಾವಿಸಿದರು. ಅವರು ರೈಲಿನಿಂದ ನಮ್ಮನ್ನು ಹೊರಗೆ ಕರೆತಂದರು. ಇದು ಒಂದು ರೀತಿ ದೇವರು ನಮಗೆ ಎರಡನೇ ಜೀವನ ನೀಡಿದಂತೆ ಭಾಸವಾಯಿತು’ ಎಂದಿದ್ದಾರೆ.
ಅಪಘಾತದ ಸಮಯದಲ್ಲಿ ಕಂಡ ದೃಶ್ಯಗಳು ಎಂದಿಗೂ ನನ್ನ ಮನಸ್ಸಿನಿಂದ ಹೋಗುವುದಿಲ್ಲ ಎಂದು ಅಪಘಾತದಲ್ಲಿ ಬದುಕುಳಿದ ಸುಬ್ರೊತೊ ಪಾಲ್ ಹೆಂಡತಿ ದೇಬೋಶ್ರೀ ಪಾಲ್ ಹೇಳಿದ್ದಾರೆ.
‘ನಾವು ನಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಲು ವೈದ್ಯರನ್ನು ನೋಡಲು ಚೆನ್ನೈಗೆ ಹೋಗುತ್ತಿದ್ದೆವು. ಬಾಲಸೋರ್‌ನಲ್ಲಿ ಅಪಘಾತ ಸಂಭವಿಸಿತು. ನಮಗೆ ಏನಾಗುತ್ತದೆ ಎಂದು ತಿಳಿಯಲೇ ಇಲ್ಲ. ಜನರು ಒಬ್ಬರ ಮೇಲೆ ಒಬ್ಬರು ಬಿಳಲಾರಂಭಿಸಿದರು. ನಮ್ಮ ಮಗು ಸಹ ಕೈಗೆ ಸಿಕ್ಕಿರಲಿಲ್ಲ. ನಾವು ಹೇಗೆ ಬದುಕುಳಿದೆವೋ ಗೊತ್ತಿಲ್ಲ. ಇದು ನಿಜಕ್ಕೂ ನಮಗೆ ಎರಡನೇ ಜೀವನ. ಬದುಕಿರುವವರೆಗೂ ಈ ದೃಶ್ಯಗಳು ನನ್ನ ಮನಸ್ಸಿನಿಂದ ಹೋಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಬೆಂಗಳೂರು–ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಭೀಕರ ಅವಘಡ ಸಂಭವಿಸಿತ್ತು.
ಘಟನೆಯಲ್ಲಿ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ.
21ನೇ ಶತಮಾನದ ಅತ್ಯಂತ ಭೀಕರ ರೈಲು ಅಪಘಾತ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.