ADVERTISEMENT

ಭಾರತದ ನಕ್ಷೆ ತಪ್ಪಾಗಿ ತೋರಿಸಿದ ವಾಟ್ಸ್ಆ್ಯಪ್‌ಗೆ ಸಚಿವ ಎಚ್ಚರಿಕೆ: ಕ್ಷಮೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 5:47 IST
Last Updated 1 ಜನವರಿ 2023, 5:47 IST
   

ನವದೆಹಲಿ: ಭಾರತದ ಭೂಪಟವನ್ನು ತಪ್ಪಾಗಿ ತೋರಿಸುವ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ವಾಟ್ಸ್‌ಆ್ಯಪ್‌, ಕೇಂದ್ರ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಅವರ ಎಚ್ಚರಿಕೆಯ ನಂತರ ಅದನ್ನು ಡಿಲಿಟ್‌ ಮಾಡಿದೆ. ತಪ್ಪಿಗೆ ಕ್ಷಮೆಯನ್ನೂ ಕೋರಿದೆ.

ಮೆಟಾ (ಫೇಸ್‌ಬುಕ್‌ನ ಮಾಲೀಕ ಸಂಸ್ಥೆ) ಮಾಲೀಕತ್ವದ ಮೆಸೇಜಿಂಗ್ ಆ್ಯಪ್‌ ಹೊಸ ವರ್ಷದ ಹಿನ್ನೆಲೆಯಲ್ಲಿ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಶನಿವಾರ ಹಂಚಿಕೊಂಡಿತ್ತು. ಇದರಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಲಾಗಿತ್ತು. ಇದನ್ನು ಗಮನಿಸಿದ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಎಚ್ಚರಿಕೆ ನೀಡಿದ್ದರು. ‘ಆತ್ಮೀಯ ವಾಟ್ಸ್‌ಆ್ಯಪ್‌, ದಯವಿಟ್ಟು ಭಾರತದ ನಕ್ಷೆಯಲ್ಲಿನ ದೋಷವನ್ನು ಆದಷ್ಟು ಬೇಗ ಸರಿಪಡಿಸಿ’ ಎಂದು ತಿಳಿಸಿದ್ದರು.

ಅಲ್ಲದೇ, ‘ಭಾರತದಲ್ಲಿ ವ್ಯಾಪಾರ ಮಾಡುವ ಮತ್ತು ಭಾರತದಲ್ಲಿ ವ್ಯಾಪಾರವನ್ನು ಮುಂದುವರಿಸಲು ಬಯಸುವ ಎಲ್ಲರೂ ದೇಶಕ್ಕೆ ಸಂಬಂಧಿಸಿದ ಸರಿಯಾದ ನಕ್ಷೆಗಳನ್ನು ಬಳಸಬೇಕು’ ಎಂದು ರಾಜೀವ್‌ ಚಂದ್ರ ಶೇಖರ್‌ ಅವರು ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರು.

ADVERTISEMENT

ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿರುವ ವಾಟ್ಸ್‌ಆ್ಯಪ್‌, ‘ಉದ್ದೇಶಪೂರ್ವಕವಲ್ಲದ ದೋಷ ನಮ್ಮಿಂದಾಗಿದೆ. ಅದರ ಬಗ್ಗೆ ತಿಳಿಸಿದ್ದಕ್ಕಾಗಿ ಸಚಿವರಿಗೆ ಧನ್ಯವಾದಗಳು. ನಾವು ತಕ್ಷಣವೇ ವಿಡಿಯೊ ಡಿಲಿಟ್‌ ಮಾಡಿದ್ದೇವೆ. ಕ್ಷಮೆಯಾಚಿಸುತ್ತೇವೆ. ಭವಿಷ್ಯದಲ್ಲಿ ಎಚ್ಚರವಾಗಿರುತ್ತೇವೆ’ ಎಂದು ಟ್ವೀಟ್‌ ಮಾಡಿದೆ.

ವಾಟ್ಸ್‌ಆ್ಯಪ್‌ ಹಂಚಿಕೊಂಡಿದ್ದ ವಿಡಿಯೊದಲ್ಲಿ ಜಮ್ಮು ಮತ್ತು ಕಾಶ್ಮೀರದ ಭೂಭಾಗವನ್ನು ತಪ್ಪಾಗಿ ಚಿತ್ರಿಸಲಾಗಿತ್ತು ಎನ್ನಲಾಗಿದೆ.

ತಪ್ಪು ನಕ್ಷೆಗೆ ಸಂಬಂಧಿಸಿದಂತೆ ಸಚಿವ ರಾಜೀವ್‌ ಚಂದ್ರಶೇಖರ್, ಈ ವಾರದ ಆರಂಭದಲ್ಲಿ ವಿಡಿಯೊ ಕಾಲಿಂಗ್‌ ಆ್ಯಪ್‌ ‘ಜೂಮ್‌’ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಯುವಾನ್ ಅವರಿಗೂ ಎಚ್ಚರಿಕೆ ನೀಡಿದ್ದರು.

ಭಾರತದ ಭೂಪಟವನ್ನು ತಪ್ಪಾಗಿ ತೋರಿಸಿದ್ದು ಇದೇ ಮೊದಲೇನೂ ಅಲ್ಲ, ವಿಕಿಪೀಡಿಯಾ ಕೂಡ ಜಮ್ಮು ಕಾಶ್ಮೀರದ ನಕ್ಷೆಯನ್ನು ತಪ್ಪಾಗಿ ತೋರಿಸಿತ್ತು. ಆ ಲಿಂಕ್‌ ಅನ್ನು ಅಳಿಸಿಹಾಕುವಂತೆ ವಿಕಿಪೀಡಿಯಾಗೆ ಕೇಂದ್ರ ಸರ್ಕಾರ ಸೂಚಿತ್ತು.

ನಕಾಶೆಯಲ್ಲಿ ತಪ್ಪಾಗಿ ಬಿಂಬಿಸಿರುವ ಬಗ್ಗೆ ಟ್ವಿಟರ್‌ ಬಳಕೆದಾರರೊಬ್ಬರು ಗಮನಸೆಳೆದಿದ್ದರು. ಭಾರತ–ಭೂತಾನ್ ಬಾಂಧವ್ಯಕ್ಕೆ ಸಂಬಂಧಿಸಿದ ವಿಕಿಪೀಡಿಯಾ ಪುಟದಲ್ಲಿ ಜಮ್ಮು–ಕಾಶ್ಮೀರದ ನಕಾಶೆಯನ್ನು ತಪ್ಪಾಗಿ ತೋರಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಮನವಿ ಮಾಡಿದ್ದರು.

‘ಐಟಿ ಕಾಯ್ದೆ 2000’ ಸೆಕ್ಷನ್ 69ಎ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಕಿಪೀಡಿಯಾಗೆ ಆದೇಶ ನೀಡಿ, ಲಿಂಕ್‌ ತೆಗೆಯುವಂತೆ ಹೇಳಿತ್ತು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂಸದ ಶಶಿ ತರೂರ್, ತಮ್ಮ ಪ್ರಣಾಳಿಕೆಯಲ್ಲಿ ಭಾರತದ ತಪ್ಪಾದ ಭೂಪಟವನ್ನು ಹಂಚಿಕೊಳ್ಳುವ ಮೂಲಕ ಟೀಕೆಗೆ ಗುರಿಯಾಗಿದ್ದರು.

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್‌ ಮಾಡಿ, ತರೂರ್ ತಮ್ಮ ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯನ್ನು ವಿರೂಪಗೊಳಿಸಿದ್ದಾರೆ ಎಂದು ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.