ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಯುಟ್ಯೂಬ್‌ನಲ್ಲಿ ಪ್ರಕಟಗೊಂಡಿರುವ 11 ವಿಡಿಯೊ ಲಿಂಕ್‌ಗಳನ್ನು ತೆಗೆಯುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಯುಟ್ಯೂಬ್‌ಗೆ ತಿಳಿಸಿದೆ.
ಗೃಹ ಸಚಿವಾಲಯದ ಸೂಚನೆ ಮೇರೆಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಿಂಗ್ ಕಮಾಂಡರ್ ಅಭಿನಂದನ್ ಅವರ ವಿಡಿಯೊ ತುಣಗಳನ್ನು ತೆಗೆಯುವಂತೆ ಯುಟ್ಯೂಬ್‌ಗೆ ಕೇಳಿದ್ದು, ತಿಳಿಸಿದ ವಿಡಿಯೊ ಲಿಂಕ್‌ಗಳನ್ನು ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗೂಗಲ್ ಸಂಸ್ಥೆಯು ಯುಟ್ಯೂಬ್‌ನ್ನು ಕಾರ್ಯನಿರ್ವಹಿಸುತ್ತಿದ್ದು, ಗೂಗಲ್ ವಕ್ತಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ’ಸರ್ಕಾರದಿಂದ ಕಾನೂನು ಸಮ್ಮತವಾದ ಮನವಿ ಬಂದಾಗ ನಮ್ಮ ನಿಯಮಗಳ ಅನ್ವಯ ಶೀಘ್ರ ಕ್ರಮಕೈಗೊಂಡು ಅಂಥಹ ವಿಡಿಯೊಗಳನ್ನು ತೆಗೆಯಲಾಗುತ್ತದೆ’ ಎಂದಿದ್ದಾರೆ.
ಗೂಗಲ್ ಸರ್ವಿಸಸ್‌ನಿಂದ ತೆಗೆಯುವಂತೆ ಸರ್ಕಾರದಿಂದ ಸ್ವೀಕರಿಸಲಾಗಿರುವ ಮನವಿಗಳ ಮಾಹಿತಿಯನ್ನು ನಮ್ಮ ಪಾರದರ್ಶಕ ವರದಿಯಲ್ಲಿ ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬುಧವಾರ ಭಾರತ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ವಿಡಿಯೊಗಳು ಅಂತರ್ಜಾಲದ ಮೂಲಕ ಬಿಡುಗಡೆಯಾಗುತ್ತಿದ್ದಂತೆ, ಟ್ವಿಟರ್, ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ.
ಉಭಯ ರಾಷ್ಟ್ರಗಳ ನೆಟಿಜನ್‌ಗಳು ವಿಡಿಯೊದೊಂದಿಗೆ ಅಭಿನಂದನ್ ಮರಳಿ ಬಾ, ಯುದ್ಧ ಬೇಡ, ಮಿಗ್ 21, ಎಫ್16 (BringbackAbhinandan, #SayNoToWar, #MiG21, #F16, #PakFakeClaim) ಹೀಗೆ ಹಲವು ಹ್ಯಾಷ್‌ಟ್ಯಾಗ್‌ಗಳು ಹಂಚಿಕೊಂಡಿದ್ದು,ಸಾಮಾಜಿಕ ಮಾಧ್ಯಮಗಳಲ್ಲಿ ಈ ಪದಗಳು ಟ್ರೆಂಡ್ ಆಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.