ನವದೆಹಲಿ: ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸಿರುವ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಪಿಎಂ ನರೇಂದ್ರ ಮೋದಿ ತೆರೆಗೆ ಬರಲು ಸಿದ್ಧವಾಗಿದೆ.ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಸಿನಿಮಾ ತೆರೆಗೆ ಬರಲಿದ್ದು, ವಿವೇಕ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಇಂಡಿಯಾ ಟುಡೇ ವಾಹಿನಿಯಲ್ಲಿ ಕಾಂಗ್ರೆಸ್ ಪ್ರತಿನಿಧಿ ನಗ್ಮಾ ಜತೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವೇಕ್ ಒಬೆರಾಯ್, ಭಾರತೀಯ ಸೇನೆ ನನ್ನ ಸೇನೆ, ಇದು ಪ್ರಧಾನಿ ನರೇಂದ್ರ ಮೋದಿಯವರ ಸೇನೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿದೆ. ಆದರೆ ಬಿಜೆಪಿ ನಾಯಕರು ಸೇನೆಯ ಕಾರ್ಯವನ್ನು ತಾವೇ ಮಾಡಿದ್ದು ಎಂಬಂತೆ ಬಿಂಬಿಸಿ ಮೋದಿಯವರ ಸೇನೆ ಎಂದು ಹೇಳುತ್ತಿದ್ದಾರೆ ಎಂದು ನಗ್ಮಾ ಆರೋಪಿಸಿದಾಗ ಸೇನೆ ನಮ್ಮೆಲ್ಲರದ್ದು ಎಂದು ವಿವೇಕ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪರ ಪ್ರಚಾರ ನಡೆಸಿದ್ದ ವಿವೇಕ್, ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ.ಈ ಸಿನಿಮಾ ಕೂಡಾ ರಾಜಕೀಯದಿಂದ ಹೊರತಾದುದು.ವಿಪಕ್ಷಗಳು ಹೇಳುವಂತೆ ರಾಜಕೀಯ ಉದ್ದೇಶದ ಸಿನಿಮಾ ಇದಲ್ಲ ಎಂದಿದ್ದಾರೆ.
ಆದಾಗ್ಯೂ, ಈ ಸಿನಿಮಾದ ನಿರ್ಮಾಪಕರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವವರಲ್ಲವೇ ಎಂದು ಕೇಳಿದಾಗ, ನಾನು ಬಿಜೆಪಿಗೆ ಸೇರಿದವನಲ್ಲ.ನಾನು ಭಾರತಕ್ಕೆ ಸೇರಿದವನು, ನಾನು ಮೋದಿಯನ್ನು ನಂಬುತ್ತೇನೆ ಆದರೆ ಬಿಜೆಪಿಯವನಲ್ಲ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮೋದಿಯನ್ನು ಹೀರೋ ಆಗಿ ಪೂಜಿಸುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ವಿವೇಕ್, ಕಳೆದ ಏಳು ದಶಕಗಳಿಂದ ಕಾಂಗ್ರೆಸ್ ಮಾಡಿಕೊಂಡು ಬಂದಿರುವ ಸರ್‌ನೇಮ್ ಪೂಜೆ ಮಾಡುವುದಕ್ಕಿಂತ ಇದು ಉತ್ತಮ ಎಂದಿದ್ದಾರೆ.
ಏತನ್ಮಧ್ಯೆ, ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ವಿವೇಕ್, ಈ ದೇಶದಲ್ಲಿ ವಾಸಿಸುತ್ತಿರುವ ಜನರೇ ಭಾರತ್ ತೇರೇ ತುಕ್ಡೇ ತುಕ್ಡೇ ಹೋಂಗೆ ಎಂದು ಘೋಷಣೆ ಕೂಗಿದರೆ ಅದಕ್ಕೆ ನಿಮ್ಮ ತಕರಾರು ಇಲ್ಲ. ಆದರೆ ನನ್ನ ಸಿನಿಮಾ ಬಗ್ಗೆ ನೀವು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದೀರಿ. ದೇಶದ್ರೋಹ ಕಾನೂನನ್ನು ಕೈ ಬಿಡುವುದರ ಬಗ್ಗೆ ನಿಮಗೇನೂ ಆಕ್ಷೇಪ ಇಲ್ಲ, ಆದರೆ ನನ್ನ ಸಿನಿಮಾ ಬಿಡುಗಡೆಗೆ ಆಕ್ಷೇಪವೊಡ್ಡುತ್ತಿದ್ದೀರಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.