ADVERTISEMENT

ತಮಿಳುನಾಡು: ಡಿಎಂಕೆ ಶಾಸಕ ಮೋಹನ್ ಮನೆಯಲ್ಲಿ ಎರಡನೇ ದಿನವೂ ಮುಂದುವರಿದ ಐ.ಟಿ ಶೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2023, 5:54 IST
Last Updated 25 ಏಪ್ರಿಲ್ 2023, 5:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಡಿಎಂಕೆ ಶಾಸಕ ಎಂ.ಕೆ. ಮೋಹನ್ ಮನೆ ಸೇರಿದಂತೆ ತಮಿಳುನಾಡು ಮೂಲದ ಪ್ರಸಿದ್ಧ ರಿಯಲ್‌ ಎಸ್ಟೇಟ್‌ ಸಂಸ್ಥೆ ಜಿ ಸ್ಕ್ವೇರ್‌ಗೆ ಸೇರಿದ ಸ್ಥಳಗಳಲ್ಲಿ ಎರಡನೇ ದಿನವೂ (ಮಂಗಳವಾರ) ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ಮುಂದುವರಿಸಿದೆ.

ಜಿ ಸ್ಕ್ವೇರ್‌ಗೆ ಸಂಬಂಧಿಸಿ ಚೆನ್ನೈ, ಕೊಯಮತ್ತೂರು ಮತ್ತು ತಿರುಚಿರಾಪಳ್ಳಿ ಸೇರಿದಂತೆ ರಾಜ್ಯದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಸೋಮವಾರ ಐಟಿ ಅಧಿಕಾರಿಗಳು ಶೋಧ ನಡೆಸಿದ್ದರು.

ಶಾಸಕ ಮೋಹನ್ ಅವರ ಪುತ್ರ ರಿಯಲ್ ಎಸ್ಟೇಟ್ ಕಂಪನಿಯಲ್ಲಿ (ಜಿ ಸ್ಕ್ವೇರ್‌) ಷೇರುದಾರರಾಗಿದ್ದಾರೆ. ಮೋಹನ್ ಅವರ ಮನೆ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಕಾರಣಕ್ಕೆ ಅವರ ಬೆಂಬಲಿಗರು ತನಿಖಾ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ADVERTISEMENT

ರಿಯಲ್ ಎಸ್ಟೇಟ್ ಸಂಸ್ಥೆಯ ಕರ್ನಾಟಕ ಮತ್ತು ತೆಲಂಗಾಣ ಕಚೇರಿಗಳಲ್ಲಿಯೂ ಶೋಧ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ದಾಳಿಗೆ ಸಂಬಂಧಿಸಿದಂತೆ ಜಿ ಸ್ಕ್ವೇರ್ ಪ್ರತಿಕ್ರಿಯಿಸಿಲ್ಲ.

ಇತ್ತೀಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಮುಖ್ಯಮಂತ್ರಿ ಸ್ಟಾಲಿನ್‌ ಸೇರಿದಂತೆ ಡಿಎಂಕೆ ಸರ್ಕಾರದ ಸಚಿವರ ವಿರುದ್ದ ಅಕ್ರಮ ಆಸ್ತಿ ಮತ್ತು ಭ್ರಷ್ಟಾಚಾರದ ಆರೋಪ ಮಾಡಿ ‘ಡಿಎಂಕೆ ಫೈಲ್ಸ್‌’ ಎಂಬ ವಿಡಿಯೊ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಐಟಿ ದಾಳಿ ನಡೆಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.