ADVERTISEMENT

BBC ಕಚೇರಿ ಮೇಲೆ ಐಟಿ ದಾಳಿ: ಇದು ಮಾಧ್ಯಮ ಸ್ವಾತಂತ್ರ್ಯದ ಹರಣ ಎಂದ ಕೇಜ್ರಿವಾಲ್‌

ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವುದು ಜನರ ಧ್ವನಿ ಉಡುಗಿಸಿದ್ದಕ್ಕೆ ಸಮ ಎಂದ ಆಪ್‌ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 10:42 IST
Last Updated 15 ಫೆಬ್ರುವರಿ 2023, 10:42 IST
   

ಬೆಂಗಳೂರು: ಬಿಬಿಸಿ ಮಾಧ್ಯಮ ಸಂಸ್ಥೆಯ ದೆಹಲಿ ಹಾಗೂ ಮುಂಬೈ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಖಂಡಿಸಿದ್ದಾರೆ.

‘ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅದರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಜನರ ಧ್ವನಿಯನ್ನು ದಮನಿಸಿದಂತೆ‘ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತೆರಿಗೆ ವಂಚನೆ ಮಾಡಿದೆ ಎನ್ನುವ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯು ಮಂಗಳವಾರ ಬಿಬಿಸಿಯ ಕಚೇರಿ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿತ್ತು. ಬುಧವಾರವೂ ಶೋಧ ಕಾರ್ಯ ಮುಂದುವರಿದಿದೆ. ಇದರ ಬೆನ್ನಲ್ಲೇ ಕೇಜ್ರಿವಾಲ್‌ ಟ್ವೀಟ್‌ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅದರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಜನರ ಧ್ವನಿಯನ್ನು ದಮನಿಸಿದಂತೆ. ಯಾರಾದರೂ ಬಿಜೆಪಿ ವಿರುದ್ಧ ಮಾತನಾಡಿದರೆ, ಇವರು ಸಿಬಿಐ, ಇಡಿ, ಐಟಿಯನ್ನು ಛೂ ಬಿಡುತ್ತಾರೆ. ಬಿಜೆಪಿಯು ದೇಶದ ಪ್ರಜಾಸತಾತ್ಮಕ ವ್ಯವಸ್ಥೆಯನ್ನು ಬಗ್ಗು ಬಡಿದು, ಇಡೀ ದೇಶವನ್ನು ತಮ್ಮ ಅಡಿಯಾಳಾಗಿ ಮಾಡಲು ಹೊರಟಿದ್ದಾರೆಯೇ?‘ ಎಂದು ಪ್ರಶ್ನೆ ಮಾಡಿದ್ದಾರೆ.

2002ರ ಗುಜರಾತ್‌ ಗಲಭೆ ಮತ್ತು ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತ ಸಾಕ್ಷ್ಯಚಿತ್ರವನ್ನು ಬಿಬಿಸಿ ಇತ್ತೀಚೆಗೆ ಪ್ರಸಾರ ಮಾಡಿತ್ತು. ಅದಾಗಿ ಕೆಲವೇ ವಾರಗಳಲ್ಲಿ ಐ.ಟಿ ಕಾರ್ಯಾಚರಣೆ ನಡೆದಿದೆ.

ಅಧಿಕಾರಿಗಳ ಜೊತೆಗೆ ಸಂಪೂರ್ಣ ಸಹಕರಿಸುವುದಾಗಿ ಬಿಬಿಸಿ ಹೇಳಿದೆ. ಈಗ ಸೃಷ್ಟಿಯಾಗಿರುವ ಸಮಸ್ಯೆಯು ಆದಷ್ಟು ಬೇಗನೆ ಪರಿಹಾರವಾಗುವ ಭರವಸೆ ಇದೆ ಎಂದೂ ಹೇಳಿದೆ.

‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಕಳೆದ ವಾರ ವಜಾ ಮಾಡಿತ್ತು. ಈ ಅರ್ಜಿಯು ಸಂಪೂರ್ಣವಾಗಿ ತಪ್ಪು ಗ್ರಹಿಕೆಯಿಂದ ಕೂಡಿದೆ ಮತ್ತು ಹುರುಳಿಲ್ಲದ್ದು ಎಂದು ಹೇಳಿತ್ತು.

ಆರೋಪಗಳೇನು?

ಅಂತರರಾಷ್ಟ್ರೀಯ ತೆರಿಗೆ ಪಾವತಿ, ಬಿಬಿಸಿಯ ಅಂಗ ಸಂಸ್ಥೆ ಗಳಿಗೆ ಸರಕು, ಸೇವೆ ಅಥವಾ ಸಿಬ್ಬಂದಿ ‘ವರ್ಗಾವಣೆ ವೆಚ್ಚ’ ಕುರಿತಂತೆ ಅಕ್ರಮ ನಡೆದಿದೆಯೇ ಎಂಬುದನ್ನು ಪರಿಶೀಲಿಸುವುದು ಆದಾಯ ತೆರಿಗೆ ಇಲಾಖೆಯ ಉದ್ದೇಶವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.