ADVERTISEMENT

ಕೇಂದ್ರ ಸರ್ಕಾರ, ತೈಲ ಕಂಪನಿಗಳು ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿವೆ: ಗೆಹಲೋತ್

ಪಿಟಿಐ
Published 16 ಸೆಪ್ಟೆಂಬರ್ 2024, 12:40 IST
Last Updated 16 ಸೆಪ್ಟೆಂಬರ್ 2024, 12:40 IST
<div class="paragraphs"><p> ಅಶೋಕ್‌ ಗೆಹಲೋತ್‌</p></div>

ಅಶೋಕ್‌ ಗೆಹಲೋತ್‌

   

ಜೈಪುರ: ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳ ಒಟ್ಟಾಗಿ ಸೇರಿ ಜನ ಸಾಮಾನ್ಯರ ಜೇಬುಗಳನ್ನು ಲೂಟಿ ಮಾಡುತ್ತಿವೆ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ವಾಗ್ದಾಳಿ ನಡೆಸಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಳೆದ ಆರು ತಿಂಗಳುಗಳಲ್ಲಿ ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ 21ರಷ್ಟು ಕಡಿಮೆಯಾಗಿದೆ. ಆದರೆ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ’ ಎಂದು ಕಿಡಿಕಾರಿದ್ದಾರೆ.

ADVERTISEMENT

‘ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಒಟ್ಟುಗೂಡಿ ಜನ ಸಾಮಾನ್ಯರ ಜೇಬುಗಳನ್ನು ಲೂಟಿ ಮಾಡುತ್ತಿರುವಂತೆ ತೋರುತ್ತಿದೆ. ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಕೆಯಾದರೆ ಪೆಟ್ರೋಲ್‌ ಬೆಲೆ ₹10 ಮತ್ತು ಡೀಸೆಲ್‌ ಬೆಲೆ ₹8ರಷ್ಟು ಕಡಿಮೆಯಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಈ ವಿಷಯದಲ್ಲಿ ರಾಜಸ್ಥಾನದ ಜನರಿಗೆ ದುಪ್ಪಟ್ಟು ಮೋಸ ಮಾಡಲಾಗಿದೆ. ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ರಾಜ್ಯದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಹರಿಯಾಣ, ಗುಜರಾತ್‌ ರಾಜ್ಯಗಳಲ್ಲಿನ ಬೆಲೆಗೆ ಸರಿಸಮನಾಗಿ ಇಳಿಕೆ ಮಾಡಲಾಗುವುದು ಎಂದು ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಅದು ಈಡೇರಿಲ್ಲ. ಮೋದಿ ಅವರ ಆ ಭರವಸೆ ಯಾವಾಗ ಈಡೇರುತ್ತದೆ ಎಂದು ರಾಜಸ್ಥಾನದ ಜನತೆಗೆ ತಿಳಿಯಬೇಕಿದೆ’ ಎಂದು ಗೆಹಲೋತ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.