ADVERTISEMENT

ರಾಹುಲ್‌ ಗಾಂಧಿ ಉತ್ತಮ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್ ಇದ್ದಂತೆ: ನಟಿ ಕಂಗನಾ ಲೇವಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜುಲೈ 2024, 5:02 IST
Last Updated 2 ಜುಲೈ 2024, 5:02 IST
<div class="paragraphs"><p>ಕಂಗನಾ ರನೌತ್‌ ಮತ್ತು ರಾಹುಲ್‌ ಗಾಂಧಿ</p></div>

ಕಂಗನಾ ರನೌತ್‌ ಮತ್ತು ರಾಹುಲ್‌ ಗಾಂಧಿ

   

–ಪಿಟಿಐ ಚಿತ್ರಗಳು

ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಹಿಂದುತ್ವದ ಬಗ್ಗೆ ಹೇಳಿಕೆ ನೀಡುವ ಮೂಲಕ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಹಾಗಾಗಿ ಅವರು ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದೆ ಕಂಗನಾ ರನೌತ್‌ ಒತ್ತಾಯಿಸಿದ್ದಾರೆ.

ADVERTISEMENT

‘ರಾಹುಲ್ ಗಾಂಧಿ ಅವರು ನಮ್ಮ ಎಲ್ಲ ಹಿಂದೂ ದೇವರು ಮತ್ತು ದೇವತೆಗಳನ್ನು ಕಾಂಗ್ರೆಸ್‌ನ ಬ್ರ್ಯಾಂಡ್‌ ರಾಯಭಾರಿಗಳು ಎಂಬಂತೆ ಬಿಂಬಿಸುವ ರಾಹುಲ್ ಗಾಂಧಿ ಅವರು ಉತ್ತಮ ಸ್ಟ್ಯಾಂಡ್‌ಅಪ್ ಕಾಮಿಡಿಯನ್ (ವಿಡಂಬನಕಾರ) ರೀತಿ ನಟನೆ ಮಾಡಿದ್ದಾರೆ’ ಎಂದು ಕಂಗನಾ ವ್ಯಂಗ್ಯವಾಡಿದ್ದಾರೆ.

'ರಾಜ ಬೇಟಾ (ರಾಹುಲ್ ಗಾಂಧಿ) ಸದನಕ್ಕೆ ಬಂದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಗೌರವಿಸಲಿಲ್ಲ. ಇದರಿಂದಾಗಿ ಬೇಸರಗೊಂಡ ಅವರು (ರಾಹುಲ್) ಕಾಮಿಡಿಯನ್ ರೀತಿ ವರ್ತಿಸಿದ್ದಾರೆ’ ಎಂದು ಕಂಗನಾ ಹೇಳಿದ್ದಾರೆ.

‘ಶಿವನ ಅಭಯಹಸ್ತವು ಕಾಂಗ್ರೆಸ್‌ನ ‘ಕೈ’ ಇದ್ದಂತೆ ಎಂದು ರಾಹುಲ್‌ ಗಾಂಧಿ ಹೇಳಿದಾಗ ಅವರ ಮಾತು ಕೇಳಿ ತಮಾಷೆ ಮಾಡುತ್ತ ನಗುತ್ತಿದ್ದೆವು. ಅಲ್ಲಾಹುವಿಗೆ ‘ಕೈ’ ಎತ್ತುವವರು ಕೂಡ ಇದೇ ಕಾಂಗ್ರೆಸ್ಸಿಗರು’ ಎಂದು ಕಂಗನಾ ಗುಡುಗಿದ್ದಾರೆ.

‘ದೇವರ ಫೋಟೊಗಳನ್ನು ಯಾವಾಗಲೂ ದೇವಾಲಯದ್ಲಲೇ ಇಡಬೇಕು ಎಂಬುದು ಸಾಮಾನ್ಯ ಸಂಗತಿ. ಆದರೆ, ರಾಹುಲ್ ಅವರು ದೇವರ ಫೋಟೊಗಳನ್ನು ತಂದು ಮೇಜಿನ ಮೇಲೆ ಇಡುವ ಮೂಲಕ ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ. ಜತೆಗೆ ಹಿಂದುತ್ವದ ಬಗ್ಗೆ ಮಾತನಾಡುವ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಹಾಗಾಗಿ ಹಿಂಸಾತ್ಮಕ ಸ್ವಭಾವ ಹೊಂದಿರುವ ಅವರು ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದ ರಾಹುಲ್ ಗಾಂಧಿ, ಭಾರತದ ‘ಹಿಂದೂ ರಾಷ್ಟ್ರ ಕಲ್ಪನೆ’ಯ ಮೇಲೆ ವ್ಯವಸ್ಥಿತ ದಾಳಿ ನಡೆಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ್ದ ರಾಹುಲ್ ಗಾಂಧಿ, ‘ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ’ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಈ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಗಿತ್ತು.

ರಾಹುಲ್‌ ಭಾಷಣಕ್ಕೆ ಆಡಳಿತ ಪಕ್ಷದ ಸದಸ್ಯರು ಪದೇ ಪದೇ ಅಡ್ಡಿಪಡಿಸಿದ್ದರು. 6–7 ಸಚಿವರು ಎದ್ದು ನಿಂತು ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಆಗ ರಾಹುಲ್‌ ಜೋರಾಗಿ, ‘ನಾನು ಹಿಂದೂ ಸಮುದಾಯದ ಬಗ್ಗೆ ಹೇಳಿಲ್ಲ. ಹಿಂದೂ ಯಾವತ್ತೂ ದ್ವೇಷ ಹಾಗೂ ಹಿಂಸೆಯನ್ನು ಹರಡುವುದಿಲ್ಲ. ಮೋದಿ ಎಂದರೆ ಇಡೀ ಹಿಂದೂ ಸಮಾಜವಲ್ಲ, ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಆರ್‌ಎಸ್‌ಎಸ್ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ದ್ವೇಷ ಹಾಗೂ ಹಿಂಸಾಚಾರವನ್ನು ಹರಡುತ್ತದೆ’ ಎಂದು ತಿರುಗೇಟು ಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.