ADVERTISEMENT

Security Breach | ಕೇಂದ್ರ ಸರ್ಕಾರ ಮೌನವಾಗಿರುವುದೇಕೆ?– ಟಿಎಂಸಿ ಸಂಸದ

ಪಿಟಿಐ
Published 14 ಡಿಸೆಂಬರ್ 2023, 10:27 IST
Last Updated 14 ಡಿಸೆಂಬರ್ 2023, 10:27 IST
   

ನವದೆಹಲಿ: ‘ಭದ್ರತಾ ಲೋಪದ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿರುವುದೇಕೆ? ಹಾಗಿದ್ದರೆ ನಿನ್ನೆ ನಡೆದ ಭದ್ರತಾ ವೈಫಲ್ಯದ ಘಟನೆ ಕೇಂದ್ರ ಸರ್ಕಾರಕ್ಕೆ ಅಷ್ಟು ಸಣ್ಣ ವಿಷಯವೇ? ಈ ಕುರಿತು ತಕ್ಷಣ ಗೃಹ ಸಚಿವರು ಹೇಳಿಕೆ ನೀಡಲಿ’ ಎಂದು ಟಿಎಂಸಿ ಸಂಸದ ಕೋಕಿಲ ಘೋಷ್‌ ದಸ್ತಿದಾರ್‌ ಒತ್ತಾಯಿಸಿದ್ದಾರೆ.

‘ಈ ರಾಷ್ಟ್ರವು ತನ್ನ ಸುರಕ್ಷತೆ, ಭದ್ರತೆ ಮತ್ತು ಅದರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ನಿನ್ನೆ ನಡೆದ ಘಟನೆಯಿಂದ ಭದ್ರತೆಯೇ ಮರೀಚಿಕೆ ಎಂದು ಸಾಬೀತಾದಂತಾಗಿದೆ’ ಎಂದರು.

‘ಹಳೆ ಸಂಸತ್‌ ಭವನವೇ ಎಷ್ಟೋ ಉತ್ತಮವಾಗಿತ್ತು. ಇಷ್ಟು ತರಾತುರಿಯಲ್ಲಿ ಹೊಸ ಸಂಸತ್‌ ಭವನವನ್ನು ತೆರೆಯುವ ಅಗತ್ಯವೇನಿತ್ತು? ಕೇವಲ ತೋರಿಕೆಗಾಗಿ ಹೊಸ ಸಂಸತ್‌ ಭವನವನ್ನು ನಿರ್ಮಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಭಯೋತ್ಪಾದಕ ಘಟನೆಯಂತೆ ಭಾಸವಾಗಿತ್ತು’

‘ಇದ್ದಕ್ಕಿದಂತೆ ಗ್ಯಾಲರಿಯಿಂದ ಸದನಕ್ಕೆ ಧುಮುಕಿದ ವ್ಯಕ್ತಿಯೊಬ್ಬ ಹೊಗೆ ಸೂಸುವ ಏನೋ ಒಂದನ್ನು ಸಿಂಪಡಿಸಿದ. ಏನಾಗುತ್ತಿದೆ ಎಂದು ಅರ್ಥೈಸಿಕೊಳ್ಳುವ ಮೊದಲೇ ಎಲ್ಲವೂ ನಡೆದು ಹೋಗಿತ್ತು. ಆ ಹೊಗೆ ವಿಷಕಾರಿಯೂ ಆಗಿರಬಹುದಿತ್ತು, ಸ್ಮೋಕ್‌ ಬಾಂಬ್‌ ಕೂಡ ಆಗಿರಬಹುದಿತ್ತು. ಒಟ್ಟಿನಲ್ಲಿ ಇದೊಂದು ಭಯೋತ್ಪಾದಕ ದಾಳಿಯಂತೆ ಭಾಸವಾಗಿತ್ತು’ ಎಂದು ದಸ್ತಿದಾರ್ ಘಟನೆಯನ್ನು ವಿವರಿಸಿದ್ದಾರೆ.

‘ಇಷ್ಟಾದರೂ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿ ಸದನದೊಳಗೆ ಇರಲಿಲ್ಲ. ಆಗಂತುಕರನ್ನು ಸಂಸದರೆ ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಬೇಕಾಯಿತು. ನಿಜಕ್ಕೂ ಇದು ಶೋಚನೀಯ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆರೋಪಿಗಳಲ್ಲಿ ಒಬ್ಬನಿಗೆ ಬಿಜೆಪಿ ಸಂಸದರ ಕಡೆಯಿಂದ ಪಾಸ್‌ ದೊರೆತಿದೆ ಎಂಬ ಮಾಹಿತಿ ಹೊರ ಬಂದಿದೆ. ಈ ಘಟನೆಯಲ್ಲಿ ಆ ಬಿಜೆಪಿ ಸಂಸದರು ಶಾಮೀಲಾಗಿದ್ದಾರೆಯೇ? ಅವರ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ?’ ಎಂದು ಪ್ರಶ್ನಿಸಿದ್ದಾರೆ.

‘ಪ್ಲಾಸ್ಟಿಕ್ ಬಾಂಬ್ ತಂದಿದ್ದರೆ ಏನು ಮಾಡುವುದು?’

‘ಘಟನೆ ನಡೆದು ಸುಮಾರು 40 ನಿಮಿಷದ ನಂತರ ಪೊಲೀಸರು ಸ್ಥಳಕ್ಕೆ ಬಂದರು. ಅಲ್ಲದೇ ಲೋಹ ಶೋಧಕ ಸಾಧನವು ಪ್ಲಾಸ್ಟಿಕ್ ಬಾಂಬ್‌ಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಒಂದು ವೇಳೆ ಆಗಂತುಕರು ಪ್ಲಾಸ್ಟಿಕ್‌ ಬಾಂಬ್‌ ತಂದಿದ್ದರೆ ಏನು ಮಾಡುವುದು?’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.