ನವದೆಹಲಿ: ‘ಗಾಳಿಯು ಶುದ್ಧವಾಗಿರುವ, ಗಾಳಿಯ ಗುಣಮಟ್ಟ ಸೂಚ್ಯಂಕವು 35 ಅಂಶಗಳಷ್ಟಿರುವ ವಯನಾಡ್‌ನಿಂದ ದೆಹಲಿಗೆ ವಾಪಸಾದೆ. ದೆಹಲಿಯನ್ನು ಪ್ರವೇಶಿಸುತ್ತಿದ್ದಂತೆಯೇ ‘ಗ್ಯಾಸ್ ಚೇಂಬರ್’ ಒಳಗೆ ಬಂದಂತೆ ಭಾಸವಾಯಿತು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಪೋಸ್ಟ್ ಹಂಚಿಕೊಂಡಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಅವರು ಹಲವು ದಿನಗಳಿಂದ ವಯನಾಡ್‌ನಲ್ಲಿಯೇ ಇದ್ದು, ಸತತ 12 ದಿನ ಪ್ರಚಾರ ನಡೆಸಿದ್ದರು. ಮತದಾನ ಮುಗಿದ ಬಳಿಕ, ಈಗ ಅವರು ದೆಹಲಿಗೆ ವಾಪಸ್ ಆಗಿದ್ದಾರೆ.
‘ಕಲುಷಿತ ಗಾಳಿಯು ಚಾದರದಂತೆ ನಗರವನ್ನು ಹೊದ್ದುಕೊಂಡಿದೆ. ಮೇಲಿನಿಂದ ನೋಡಿದರೆ ಭಯಾನಕ ಎನಿಸುವಂತಿದೆ. ದೆಹಲಿಯ ವಾಯು ಗುಣಮಟ್ಟವು ವರ್ಷದಿಂದ ವರ್ಷಕ್ಕೆ ಇಳಿಕೆ ಕಾಣುತ್ತಲೇ ಇದೆ. ನಾವೆಲ್ಲರೂ ಒಟ್ಟಾಗಿ ಈ ಬಗ್ಗೆ ಕೆಲಸ ಮಾಡಲೇ ಬೇಕಿದೆ’ ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ಈ ಕೆಲಸಕ್ಕೆ ಪಕ್ಷಗಳ ಭೇದ ಬೇಡ. ಆ ಪಕ್ಷ ಈ ಪಕ್ಷ ಎನ್ನದೆ ಎಲ್ಲರೂ ಕೆಲಸ ಮಾಡಬೇಕಿದೆ. ಮಕ್ಕಳಿಗೆ, ವೃದ್ಧರಿಗೆ ಈಗಾಗಲೇ ಉಸಿರಾಟದ ತೊಂದರೆ ಅನುಭವಿಸುತ್ತಿರುವವರಿಗೆ ಈ ಗಾಳಿಯನ್ನು ಉಸಿರಾಡಲು ಸಾಧ್ಯವೇ ಇಲ್ಲದಂತಾಗಿದೆ. ನಾವೆಲ್ಲರೂ ಏನಾದರೂ ಒಂದು ಮಾಡಬೇಕಿದೆ’ ಎಂದಿದ್ದಾರೆ.
ದೆಹಲಿಯಲ್ಲಿ ‘ಅಪಾಯಕಾರಿ’ ಸ್ಥಿತಿ
ದೆಹಲಿಯಲ್ಲಿ ಹಲವು ದಿನಗಳಿಂದ ಗಾಳಿಯ ಗುಣಮಟ್ಟವು ತೀವ್ರ ಕುಸಿತ ಕಂಡಿದೆ. ಚಳಿಗಾಲ ಆರಂಭದ ಈ ದಿನಗಳಲ್ಲಿ ಮೊದಲ ಬಾರಿಗೆ ನಗರದ ಗಾಳಿ ಗುಣಮಟ್ಟದ ಸೂಚ್ಯಂಕವು ಬುಧವಾರ ‘ಅಪಾಯಕಾರಿ’ ಮಟ್ಟಕ್ಕೆ ತಲುಪಿತ್ತು. ಗುರುವಾರ ನಗರದ ಗಾಳಿ ಗುಣಮಟ್ಟದ ಸೂಚ್ಯಂಕವು 428 ಅಂಶಗಳಷ್ಟಿತ್ತು ಮತ್ತು ಸತತ ಎರಡನೇ ದಿನವೂ ಗಾಳಿಯು ‘ಅಪಾಯಕಾರಿ’ ಮಟ್ಟದಲ್ಲಿತ್ತು. ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ನಗರದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ‘ಶುಕ್ರವಾರದ ಹೊತ್ತಿಗೆ ವಾಯು ಗುಣಮಟ್ಟದ ಸ್ಥಿತಿಯು ಸರಿಹೋಗಲಿದೆ’ ಎಂದು ದೆಹಲಿ ಸರ್ಕಾರ ಹೇಳಿದೆ. ತುರ್ತು ವಿಚಾರಣೆ: ದೆಹಲಿಯು ಜಗತ್ತಿನಲ್ಲಿಯೇ ಅತ್ಯಂತ ಮಾಲಿನ್ಯದ ನಗರವಾಗಬಾರದು. ಆದ್ದರಿಂದ ವಾಯು ಗುಣಮಟ್ಟ ಸುಧಾರಿಸುವ ಕುರಿತು ಕ್ರಮಗಳನ್ನು ಜಾರಿ ಮಾಡುವ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ಸಮ್ಮತಿಸಿದೆ. ವಿಚಾರಣೆಯು ನ.18ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.