ADVERTISEMENT

LS Speaker: ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಎದುರು 'ಇಂಡಿಯಾ’ದ ಸುರೇಶ್ ಕಣಕ್ಕೆ

ಪಿಟಿಐ
Published 25 ಜೂನ್ 2024, 9:47 IST
Last Updated 25 ಜೂನ್ 2024, 9:47 IST
   

ನವದೆಹಲಿ: ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಓಂ ಬಿರ್ಲಾ ಅವರನ್ನು ಕಣಕ್ಕಿಳಿಸಿದ್ದರೆ, ಇಂಡಿಯಾ ಬಣದಿಂದ ಕಾಂಗ್ರೆಸ್‌ ಸಂಸದ ಕೊಡಿಕುನ್ನಿಲ್ ಸುರೇಶ್ ಅವರನ್ನು ಕಣಕ್ಕಿಳಿಸಲಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಡೆಪ್ಯುಟಿ ಸ್ಪೀಕರ್ ಆಯ್ಕೆ ವಿಚಾರವಾಗಿ ನಡೆದ ಮಾತುಕತೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಇಂಡಿಯಾ ಬಣ ಅಭ್ಯರ್ಥಿಯನ್ನು ಘೋಷಿಸಿದೆ.

ಬುಧವಾರ ಲೋಕಸಭೆಯ ನೂತನ ಸ್ಪೀಕರ್ ಆಯ್ಕೆಗೆ ಮತದಾನ ನಡೆಯಲಿದೆ.

ಬಿರ್ಲಾ ಮತ್ತು ಸುರೇಶ್ ಕ್ರಮವಾಗಿ ಎನ್‌ಡಿಎ ಮತ್ತು ಇಂಡಿಯಾ ಬಣಗಳ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ADVERTISEMENT

17ನೇ ಲೋಕಸಭೆಯಲ್ಲೂ ಬಿರ್ಲಾ ಸಭಾಧ್ಯಕ್ಷರಾಗಿದ್ದರು. ಒಂದೊಮ್ಮೆ ಅವರು ಗೆದ್ದರೆ ಕಳೆದ 25 ವರ್ಷಗಳಲ್ಲಿ 2ನೇ ಬಾರಿಗೆ ಈ ಹುದ್ದೆಗೆ ಏರಿದ ಏಕೈಕ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ರಾಜಸ್ಥಾನದ ಕೋಟ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಬಿರ್ಲಾ ಆಯ್ಕೆಯಾಗಿದ್ದಾರೆ.

ಕೇರಳದಿಂದ 7ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಸುರೇಶ್ ತಮ್ಮ ಸ್ಪರ್ಧೆ ಕುರಿತಂತೆ ಪ್ರತಿಕ್ರಿಯಿಸಿದ್ದು, ಇದು ಸೋಲು, ಗೆಲುವಿನ ವಿಷಯವಲ್ಲ. ಸ್ಪೀಕರ್ ಆಡಳಿತ ಪಕ್ಷದಿಂದ ಮತ್ತು ಡೆಪ್ಯುಟಿ ಸ್ಪೀಕರ್ ವಿಪಕ್ಷದಿಂದ ಆಯ್ಕೆಯಾಗಬೇಕೆಂಬ ಸಂಪ್ರದಾಯವಿದೆ ಎಂದು ಹೇಳಿದ್ದಾರೆ.

‘ಕಳೆದ ಎರಡೂ ಲೋಕಸಭೆಗಳಲ್ಲಿ ಅವರು ನಮಗೆ ಡೆಪ್ಯುಟಿ ಸ್ಪೀಕರ್ ಸ್ಥಾನ ನೀಡಲು ನಿರಾಕರಿಸಿದ್ದರು. ಏಕೆಂದರೆ, ನಿಮಗೆ ಅಧಿಕೃತ ಪ್ರತಿಪಕ್ಷದ ಸ್ಥಾನ ಸಿಕ್ಕಿಲ್ಲ ಎಂದು ಹೇಳುತ್ತಿದ್ದರು. ಈಗ ನಾವು ಅಧಿಕೃತ ವಿರೋಧ ಪಕ್ಷದ ಅರ್ಹತೆ ಪಡೆದಿದ್ದೇವೆ. ಡೆಪ್ಯುಟಿ ಸ್ಪೀಕರ್ ಹುದ್ದೆ ನಮ್ಮ ಹಕ್ಕು. ಆದರೆ, ಆಡಳಿತ ಪಕ್ಷವು ನಮಗೆ ಅದನ್ನು ನೀಡಲು ಸಿದ್ಧವಿಲ್ಲ. ಬೆಳಿಗ್ಗೆ 11.50ರವರೆಗೆ ಅವರ ಪ್ರತಿಕ್ರಿಯೆಗಾಗಿ ಕಾದೆವು. ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ಎಂದು ಸುರೇಶ್ ಹೇಳಿದ್ದಾರೆ.

ನೂತನ ಸ್ಪೀಕರ್ ಆಗಿ ಬಿರ್ಲಾ ಅವರ ಆಯ್ಕೆಗೆ ಬೆಂಬಲ ನೀಡಬೇಕೆಂದು ಸಚಿವ ರಾಜನಾಥ್ ಸಿಂಗ್ ಅವರು ವಿಪಕ್ಷಗಳ ನಾಯಕರಿಗೆ ಮನವಿ ಮಾಡಿದ್ದರು. ಆದರೆ, ಸಂಪ್ರದಾಯ ಮತ್ತು ಹಿಂದಿನ ವಾಡಿಕೆ ಅನುಸಾರ ನಮಗೆ ಡೆಪ್ಯುಟಿ ಸ್ಪೀಕರ್ ಹುದ್ದೆ ನೀಡಲೇಬೇಕು ಎಂದು ಕಾಂಗ್ರೆಸ್ ಪಟ್ಟುಹಿಡಿದಿದೆ ಎಂದು ವರದಿ ತಿಳಿಸಿದೆ.

ಈ ಹಿಂದಿನ ಲೋಕಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಇರಲಿಲ್ಲ.

ಡೆಪ್ಯುಟಿ ಸ್ಪೀಕರ್ ಆಯ್ಕೆ ಚುನಾವಣೆಯ ಸಂದರ್ಭದಲ್ಲಿ ಆ ಬಗ್ಗೆ ಚರ್ಚಿಸುವುದಾಗಿ ರಾಜನಾಥ್ ಸಿಂಗ್ ಹೇಳಿದ್ದರೂ ಇಂಡಿಯಾ ಬಣ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿರುವುದು ತಪ್ಪು ಎಂದು ಸಚಿವರಾದ ರಾಜೀವ್ ರಂಜನ್ ಸಿಂಗ್ ಮತ್ತು ಪೀಯೂಷ್ ಗೋಯಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.