ADVERTISEMENT

ಮಹಾರಾಷ್ಟ್ರದಲ್ಲಿದ್ದೂ ಮರಾಠಿಗರನ್ನು ಅಪಮಾನಿಸಿದ ಕೋಶಿಯಾರಿ: ಠಾಕ್ರೆ ಆಕ್ರೋಶ

ಪಿಟಿಐ
Published 30 ಜುಲೈ 2022, 11:19 IST
Last Updated 30 ಜುಲೈ 2022, 11:19 IST
 ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ‘ಮುಂಬೈ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಕ್ಷಮೆಯಾಚಿಸಬೇಕು ಎಂದಿರುವ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ, ಕೋಶಿಯಾರಿ ಅವರನ್ನು ಮನೆಗೆ ಕಳುಹಿಸಬೇಕೇ ಅಥವಾ ಜೈಲಿಗೆ ಕಳುಹಿಸಬೇಕೇ ಎಂದು ನಿರ್ಧರಿಸುವ ಸಮಯ ಬಂದಿದೆ’ ಎಂದಿದ್ದಾರೆ.

ಮುಂಬೈ ಮತ್ತು ಥಾಣೆಯಲ್ಲಿ ಶಾಂತಿಯುತವಾಗಿ ವಾಸಿಸುವ ಹಿಂದೂಗಳನ್ನು ರಾಜ್ಯಪಾಲರು ಧ್ರುವೀಕರಿಸುತ್ತಿದ್ದಾರೆ’ ಎಂದು ಠಾಕ್ರೆ ಆರೋಪಿಸಿದ್ದಾರೆ.

ಮುಂಬೈನ ಪಶ್ಚಿಮ ಉಪನಗರ ಅಂಧೇರಿಯಲ್ಲಿ ಶುಕ್ರವಾರ ವೃತ್ತವೊಂದಕ್ಕೆ ನಾಮಕರಣ ಮಾಡುವ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ರಾಜ್ಯಪಾಲ ಕೋಶಿಯಾರಿ, ‘ನಾನು ಇಲ್ಲಿನ ಜನರಿಗೆ ಹೇಳಬಯಸುತ್ತೇನೆ. ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಹೊರಹಾಕಿದರೆ ನಿಮ್ಮ ಬಳಿ ಹಣವಿರುವುದಿಲ್ಲ. ಮುಂಬೈ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ’ ಎಂದು ಹೇಳಿದ್ದರು.

ADVERTISEMENT

ತಮ್ಮ ಹೇಳಿಕೆ ವಿವಾದಕ್ಕೆ ತಿರುಗುತ್ತಲೇ ರಾಜ್ಯಪಾಲರು ಶನಿವಾರ ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ‘ಮರಾಠಿ ಮಾತನಾಡುವ ಜನರ ಶ್ರಮವನ್ನು ತುಚ್ಛೀಕರಿಸುವ ಉದ್ದೇಶ ನನಗಿಲ್ಲ’ ಎಂದಿದ್ದಾರೆ.

ತಮ್ಮ ನಿವಾಸ 'ಮಾತೋಶ್ರೀ'ಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ‘ರಾಜ್ಯಪಾಲರು ಮರಾಠಿ ಜನರ ವಿರುದ್ಧ ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರುವ ದ್ವೇಷವು ಆಕಸ್ಮಿಕವಾಗಿ ಹೊರಬಂದಿದೆ. ಅವರು ಮರಾಠಿಗರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

‘ಕೋಶಿಯಾರಿ ಅವರನ್ನು ಮನೆಗೆ ಕಳುಹಿಸಬೇಕೋ ಅಥವಾ ಜೈಲಿಗೆ ಕಳುಹಿಸಬೇಕೋ ಎಂದು ನಿರ್ಧರಿಸುವ ಸಮಯ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಉಳಿದುಕೊಂಡಿದ್ದರೂ ಮರಾಠಿ ಭಾಷಿಕರನ್ನು ಅವಮಾನಿಸಿದ್ದಾರೆ. ಈಗ ಈ ಹೇಳಿಕೆಗಳಿಂದ ಅವರು ರಾಜ್ಯಪಾಲರ ಹುದ್ದೆಗೆ ಅಗೌರವ ತಂದಿದ್ದಾರೆ’ ಎಂದು ಠಾಕ್ರೆ ಆರೋಪಿಸಿದ್ದಾರೆ.

‘ಸರ್ಕಾರ ಒಂದೆಡೆ ಕೋವಿಡ್‌ ವಿರುದ್ಧ ಹೋರಾಡುತ್ತಿದ್ದರೆ ಮತ್ತೊಂದೆಡೆ ಜನ ಸಾಯುತ್ತಿದ್ದರು. ಅಂಥ ಸಂದರ್ಭದಲ್ಲಿ ರಾಜ್ಯಪಾಲರು ದೇವಸ್ಥಾನಗಳ ಬಾಗಿಲು ತೆಗೆಯುವಂತೆ ಒತ್ತಾಯಿಸಿದ್ದರು‘ ಎಂದು ಅವರು ಇದೇ ವೇಳೆ ಹೇಳಿದರು.

‘ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ 12 ಮಂದಿಯ ಹೆಸರುಗಳನ್ನು ಶಿಫಾರಸು ಮಾಡಿದರೆ ಕೋಶಿಯಾರಿ ಅನುಮೋದಿಸಲಿಲ್ಲ. ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ವಿರುದ್ಧವೂ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದರು’ ಎಂದು ಠಾಕ್ರೆ ಆರೋಪಿಸಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.