ADVERTISEMENT

ವಿಡಿಯೊ ಸ್ಟೋರಿ: ಗೆಹ್ಲೋಟ್ ಕುಟುಂಬದ ಕುಡಿಗೆ ಜೋಧಪುರ ಒಲಿಯುವುದೇ?

ಕಣದಲ್ಲಿ ಕುಡಿಗಳು

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 9:07 IST
Last Updated 4 ಜೂನ್ 2019, 9:07 IST
ತಂದೆ ಮತ್ತು ಕುಟುಂಬದೊಂದಿಗೆ ವೈಭವ್ ಗೆಹ್ಲೋಟ್ (ಎಡದಿಂದ ಎರಡನೆಯವರು)
ತಂದೆ ಮತ್ತು ಕುಟುಂಬದೊಂದಿಗೆ ವೈಭವ್ ಗೆಹ್ಲೋಟ್ (ಎಡದಿಂದ ಎರಡನೆಯವರು)   

ಕುಟುಂಬ ರಾಜಕಾರಣವಾಗಲಿ, ಅಪ್ಪನ ಭದ್ರಕೋಟೆಯಿಂದ ಮಕ್ಕಳು ಕಣಕ್ಕಿಳಿಯುವ ವಿದ್ಯಮಾನವಾಗಲಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇದು ದೇಶವ್ಯಾಪಿ ಕಂಡು ಬರುತ್ತಿರುವ ಈ ಬೆಳವಣಿಗೆ. ಈ ಬಾರಿಯ ಲೋಕಸಭೆ ಚುನಾವಣೆಗೆ ವಿವಿಧ ರಾಜ್ಯಗಳಿಂದ ಕಣಕ್ಕಿಳಿದಿರುವ, ರಾಜಕೀಯವನ್ನೇ ಉಸಿರಾಡುತ್ತಿರುವ ಕುಟುಂಬದ ಕುಡಿಗಳನ್ನು ಪರಿಚಯಿಸುವ ವಿಡಿಯೊ ಸರಣಿಯ 3ನೇ ಭಾಗದಲ್ಲಿ ರಾಜಸ್ಥಾನದಜೋಧ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿಕಣಕ್ಕಿಳಿದಿರುವವೈಭವ್‌ ಗೆಹ್ಲೋಟ್‌ಅವರನ್ನು ಪರಿಚಯಿಸಲಾಗಿದೆ.

ರಾಜಸ್ಥಾನದಜೋಧ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿಈ ಬಾರಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಮಗ 38ರ ಹರೆಯದ ವೈಭವ್‌ ಗೆಹ್ಲೋಟ್‌ ಕಣಕ್ಕಿಳಿದಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಅಡಿ ಇಡುತ್ತಿರುವ ವೈಭವ್‌ ನಾಮಪತ್ರ ಸಲ್ಲಿಸಿದ ರೀತಿ ವಿಶಿಷ್ಟವಾಗಿತ್ತು. ಏಪ್ರಿಲ್‌ 1ರಂದು ನಾಮಪತ್ರ ಸಲ್ಲಿಕೆಗೆ ಸಕಲ ಸಿದ್ಧತೆ ನಡೆದಿತ್ತು. ಇತ್ತ ಅಭಿಮಾನಿಗಳು, ಕಾರ್ಯಕರ್ತರು, ಕುಟುಂಬದವರು ಕಾಯುತ್ತಾ ಇದ್ದರೆ, ಅತ್ತ ಜೈಪುರದಿಂದಬಂದ ರೈಲಿನಿಂದ ಆಗಮಿಸಿದ ಜನರ ನಡುವಿನಿಂದ ನುಗ್ಗಿ ಬಂದರು ವೈಭವ್‌.

ಅದು ತಮ್ಮನ್ನು ತಾವು ‘ಜನಸಾಮಾನ್ಯ’, ‘ಸರಳ ಜೀವಿ’ ಎಂದು ಬಿಂಬಿಸಲು ಮಾಡಿಕೊಂಡಿದ್ದ ಪೂರ್ವಯೋಜಿತ ತಯಾರಿ. ಮಡದಿ ಮತ್ತು ಮಗಳೂ ಅವರ ಜೊತೆಯಲ್ಲೇ ಪ್ರಯಾಣ ಮಾಡಿದ್ದರು. ಬರುತ್ತಿದ್ದಂತೆ ಅಶೋಕ್‌ ಗೆಹ್ಲೋಟ್‌ ಅವರ ಹಿರಿಯ ಸಹೋದರಿ ವಿಮಲಾ ದೇವಿ ಅವರ ಆಶೀರ್ವಾದ ಪಡೆದು, ಬಳಿಕ ನಾಮಪತ್ರ ಸಲ್ಲಿಸಲು ಮುಂದಾದರು.

ವೃತ್ತಿಯಲ್ಲಿ ವಕೀಲರಾಗಿರುವ ವೈಭವ್‌ ಪುಣೆಯ ಐಎಲ್‌ಎಸ್‌ ಕಾನೂನು ಕಾಲೇಜಿನಿಂದ ಪದವಿ ಪಡೆದಿದ್ದಾರೆ. ತಮ್ಮ ತಂದೆ ರಾಜಕೀಯ ಪ್ರವೇಶಿಸಿ ನೆಲೆಕಂಡುಕೊಂಡ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 1980ರಲ್ಲಿ ಮೊದಲ ಸಲ ಇಲ್ಲಿಂದ ಕಣಕ್ಕಿಳಿದಿದ್ದ ಅಪ್ಪ ಗೆಹ್ಲೋಟ್‌, ಈ ಕ್ಷೇತ್ರದಿಂದ ಒಟ್ಟು ಐದು ಬಾರಿ ಸಂಸತ್‌ ಪ್ರವೇಶಿಸಿದ್ದಾರೆ. ವೈಭವ್‌ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾತನಾಡಿದ್ದ ಅವರು ತನಗೆ ದೊರೆತಂತೆ ಪುತ್ರನಿಗೂ ಈ ಕ್ಷೇತ್ರದ ಜನರ ಆಶೀರ್ವಾದ ಲಭಿಸಬೇಕು ಎಂದಿದ್ದರು.

ಪುತ್ರನಿಗೆ ಟಿಕೆಟ್‌ ಸಿಗುವಂತೆ ನೋಡಿಕೊಂಡದ್ದಕ್ಕೆ ಪಕ್ಷದಲ್ಲಿ ಮೂಡಬಹುದಾದ ಅಸಮಾಧಾನವನ್ನು ತಡೆಯಲು ‘ವೈಭವ್‌ ಕೂಡ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾನೆ’ ಎಂದು ಪದೇಪದೇ ಒತ್ತಿ ಹೇಳುತ್ತಿದ್ದಾರೆ ಗೆಹ್ಲೋಟ್‌. ತಂದೆಯ ಮಾತು ಸತ್ಯವೆಂದು ಹೇಳಲು ವೈಭವ್‌ ಅವರೂ ಹಿಂದೆ ಬೀಳಲಿಲ್ಲ.

‘ನಾನು ವಿದೇಶದಲ್ಲಿದ್ದು ಬಂದವನಲ್ಲ. ಅಥವಾ ರಾಜಸ್ಥಾನದ ಹೊರಗಿದ್ದು ಯಾವುದೋ ವ್ಯವಹಾರ ಮಾಡಿಕೊಂಡಿದ್ದು ಇದೀಗ ನೇರವಾಗಿ ಬಂದು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸದೆ ಕಳೆದ ಹದಿನೈದು ವರ್ಷಗಳಿಂದ ದುಡಿದಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ‘2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆಗ ರಾಜಸ್ಥಾನ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಿ.ಪಿ. ಜೋಶಿ ಅವರು ತೋಂಕ್‌–ಸವಾಯ್‌ ಮಾಧೋಪುರ್‌ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಪ್ರಸ್ತಾಪಿಸಿದ್ದರು. ಆದರೆ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನನ್ನ ತಂದೆ ಗೆಹ್ಲೋಟ್‌, ಜೋಶಿ ಅವರ ಪ್ರಸ್ತಾಪವನ್ನು ತಿರಸ್ಕರಿಸಿ ಅವನಿನ್ನೂ ಪಕ್ಷಕ್ಕಾಗಿ ದುಡಿಯಬೇಕಿದೆ ಎಂದಿದ್ದರು. ಒಂದುವೇಳೆ ಆಗ ಒಪ್ಪಿಗೆ ಸಿಕ್ಕಿದ್ದಿದ್ದರೆ, 2009ರಲ್ಲೇ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೆ. ಅಂತೂ ಈಗ ಆ ಅವಕಾಶ ಒದಗಿಬಂದಿದೆ. ಹಾಗಾಗಿ ನನಗೆ ಟಿಕೆಟ್‌ ಸಿಕ್ಕಿರುವುದು ಕ್ಷಿಪ್ರ ಬೆಳವಣಿಗೆ ಏನಲ್ಲ’ ಎಂದೂ ಮಾಧ್ಯಮಗಳ ಎದುರು ವಿವರಿಸಿದ್ದಾರೆ.

ವೈಭವ್‌ ಅವರು ದೆಹಲಿಯ ಏರ್‌ಫೋರ್ಸ್‌ ಬಲ್‌ ಬಿಹಾರಿ ಶಾಲೆಯ ಹಳೇ ವಿದ್ಯಾರ್ಥಿ. 2003ರಲ್ಲಿ ಸರ್ದಾರ್‌ಪುರ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಶೋಕ್‌ ಗೆಹ್ಲೋಟ್‌ ಅವರಿಗೆ ಪ್ರಚಾರ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ ವೈಭವ್‌ ಅದಕ್ಕೂ ಮುನ್ನ ರಾಜಸ್ಥಾನ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡುತ್ತಿದ್ದರು. ಆಗಲೇ ರಾಜಕೀಯಕ್ಕೆ ಬಂದರೂ ವೈಭವ್‌ ಎಲ್ಲರ ಗಮನ ಸೆಳೆದದ್ದು 2005ರಲ್ಲಿ. ಯುವ ಕಾಂಗ್ರೆಸ್‌ ಸದಸ್ಯರಾಗಿದ್ದ ಅವರು, ಪ್ರತಿಭಟನೆಯೊಂದರ ಸಂದರ್ಭ ಪೊಲೀಸರಿಂದ ಲಾಠಿ ಪೆಟ್ಟು ತಿಂದದ್ದು ಸುದ್ದಿಯಾಗಿತ್ತು. ಆ ಬಳಿಕ ಮುನ್ನಲೆಗೆ ಬಂದರು.

ಅದಾದ ಬಳಿಕ ಅವರ ಇಮೇಜ್‌ ಬದಲಾಗುತ್ತಾ ಸಾಗಿತು. ರಾಜ್ಯಕಾಂಗ್ರೆಸ್ ಕಾರ್ಯನಿರ್ವಾಹಕಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. ಈ ವೇಳೆ ತಂದೆ ಪ್ರತಿನಿಧಿಸುತ್ತಿದ್ದ ಜೋಧ್‌ಪುರ ಲೋಕಸಭೆ ಕ್ಷೇತ್ರದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮಾತ್ರವಲ್ಲದೆ ಹಲವು ಚುನಾವಣೆಗಳಲ್ಲಿ ತಂದೆಯ ಕ್ಷೇತ್ರದ ಪ್ರಚಾರದ ಹೊಣೆ ಹೊತ್ತರು. ಜೊತೆಜೊತೆಗೆ, ಮಾರ್ವಾರ್‌ ಪ್ರದೇಶದಲ್ಲಿನ ಇತರ ಅಭ್ಯರ್ಥಿಗಳ ಪರವೂ ಪ್ರಚಾರ ರ‍್ಯಾಲಿಗಳಲ್ಲಿಯೂ ಭಾಗವಹಿಸಲಾರಂಭಿಸಿದರು.

ಇದೀಗ ಚುನಾವಣಾ ರಾಜಕೀಯದ ಮೊದಲ ಹೆಜ್ಜೆ ಇಡುತ್ತಿರುವ ವೈಭವ್‌ ಹೆಗಲ ಮೇಲೆ ಅಪಾರ ನಿರೀಕ್ಷೆಯ ಹೊರೆ ಇದೆ. ಜಯದ ಮೂಲಕ ಶುಭಾರಂಭ ಮಾಡುವ ಒತ್ತಡದೊಟ್ಟಿಗೆ, ಕಳೆದ ಲೋಕಸಭೆ ವೇಳೆ ಬಿಜೆಪಿ ಪಾಲಾಗಿರುವ ಜೋಧ್‌ಪುರದಲ್ಲಿ ಮತ್ತೊಮ್ಮೆ ‘ಕೈ’ ಮೇಲಾಗಿಸುವ ಸವಾಲೂ ಇದೆ.

ಕ್ಷೇತ್ರ ವ್ಯಾಪ್ತಿಗೆ ಒಟ್ಟು ಎಂಟು ವಿಧಾನಸಭೆಗಳು ಬರುತ್ತವೆ. ಎರಡರಲ್ಲಿ ಬಿಜೆಪಿ ಶಾಸಕರಿದ್ದರೆ, ಐದುಕಡೆ ಕಾಂಗ್ರೆಸ್‌ ಶಾಸಕರಿದ್ದಾರೆ.ಕಳೆದ ಲೋಕಸಭೆ ಚುನಾವಣೆ ವೇಳೆ ಇಲ್ಲಿ ಮೋದಿ ಅಲೆ ಜೋರಾಗಿತ್ತು. ಈ ಬಾರಿ ಬದಲಾದ ಸನ್ನಿವೇಶದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾಣಲು ಮೇ 23ರವರೆಗೆ ಕಾಯಲೇಬೇಕು.

(ಮಾಹಿತಿ– ಅಭಿಲಾಷ್, ವಿಡಿಯೊ– ಅಬ್ದುಲ್ ಬಾಸಿತ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.