ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಲಷ್ಕರ್–ಎ–ತಯಬಾದ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ನಿಹಾಮ ಪ್ರದೇಶದಲ್ಲಿ ಉಗ್ರರು ಅಡಗಿರಬಹುದು ಎಂಬ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದವು. ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಅಡಗಿ ಕೂತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪ್ರತಿದಾಳಿ ನಡೆಸಿದ ಭದ್ರತಾ ಸಿಬ್ಬಂದಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಎರಡು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹತ್ಯೆಯಾದವರನ್ನು ರಿಯಾಜ್ ದಾರ್ ಮತ್ತು ರಾಯೀಸ್ ಎಂದು ಗುರುತಿಸಲಾಗಿದೆ. ದಾರ್ 2015ರಲ್ಲಿ ಹಾಗೂ ರಾಯೀಸ್ 2021ರಲ್ಲಿ ಉಗ್ರ ಸಂಘಟನೆ ಸೇರಿದ್ದ ಎಂದು ತಿಳಿದುಬಂದಿದೆ.
ಹೆಡ್ ಕಾನ್‌ಸ್ಟೆಬಲ್ ಕೊಲೆ–ನಕ್ಸಲರ ಕೈವಾಡದ ಶಂಕೆ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ಚಟುವಟಿಕೆ ಇರುವ ಗ್ರಾಮದಲ್ಲಿ ಹೆಡ್ ಕಾನ್‌ಸ್ಟೆಬಲ್ ಒಬ್ಬರ ಹತ್ಯೆಯಾಗಿದ್ದು, ಇದು ನಕ್ಸಲರದ್ದೇ ಕೃತ್ಯ ಎಂದು ಶಂಕಿಸಲಾಗಿದೆ.
ನಕ್ಸಲರಿಂದ ವ್ಯಕ್ತಿಯ ಭೀಕರ ಹತ್ಯೆ:
ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ 15–20 ನಕ್ಸಲರ ಗುಂಪೊಂದು ಮನೆಯಲ್ಲಿ ಊಟ ಮಾಡುತ್ತಿದ್ದ 45 ವರ್ಷದ ವ್ಯಕ್ತಿಯೊಬ್ಬರನ್ನು ಹೊರೆಗೆಳೆದು, ಹತ್ಯೆ ಮಾಡಿ ಪರಾರಿಯಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ನಕ್ಸಲರ ಚಲನವಲನಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂಬ ಅನುಮಾನದಿಂದಾಗಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಪೊಲೀಸರು ಮತ್ತು ಸಾವಿಗೀಡಾದ ವ್ಯಕ್ತಿಯ ಮಧ್ಯೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ.
ತೆಲಂಗಾಣದ ಮುಲುಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸಿಪಿಐ (ಮಾವೋವಾದಿ) ಸದಸ್ಯರೊಬ್ಬರು ಅಡಗಿಸಿಟ್ಟ ಕಚ್ಚಾ ಬಾಂಬ್ ಸ್ಫೋಟಗೊಂಡು 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕೊಂಗಲ್ ಗ್ರಾಮದ ಬಳಿಯಿರುವ ಕಾಡಿನಲ್ಲಿ ಉರುವಲು ಸೌದೆ ತರಲು ಹೋಗಿದ್ದ ಸಂತ್ರಸ್ತ ವ್ಯಕ್ತಿಯು ಮಗನ ಜೊತೆಗೆ ಹೋಗಿದ್ದರು. ಈ ವೇಳೆ ಗೊತ್ತಿಲ್ಲದೆ ಕಚ್ಚಾ ಬಾಂಬ್ ತುಳಿದಾಗ ಸ್ಫೋಟಗೊಂಡಿದೆ. ತಮ್ಮ ಇರುವಿಕೆಯನ್ನು ತೋರಿಸುವ ಸಲುವಾಗಿ ಪೀಪಲ್ ಕಮಿಟಿ (ಮಾವೋವಾದಿ) ಈ ಪ್ರದೇಶಗಳಲ್ಲಿ ಕಚ್ಚಾ ಬಾಂಬ್ ಇಡುತ್ತಿದೆ. ಮೇ 30ರಂದು ಮತ್ತೊಂದು ಗ್ರಾಮದಲ್ಲಿ ನಡೆದಿದ್ದ ಇಂಥದ್ದೇ ಘಟನೆಯಲ್ಲಿ ಶ್ವಾನವೊಂದು ಬಲಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.