ADVERTISEMENT

J&Kನಲ್ಲಿ ಕಾಂಗ್ರೆಸ್ ಅಸ್ಥಿರಗೊಳಿಸಲು ಯತ್ನ: ವಾನಿ ಕೆಳಕ್ಕಿಳಿಸಲು ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 10:34 IST
Last Updated 26 ಅಕ್ಟೋಬರ್ 2024, 10:34 IST
<div class="paragraphs"><p>ವಿಕಾರ್ ರಸೂಲ್ ವಾನಿ</p></div>

ವಿಕಾರ್ ರಸೂಲ್ ವಾನಿ

   

ಪಿಟಿಐ ಚಿತ್ರ

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಸ್ಥಿರಗೊಳಿಸಲು ರಾಜ್ಯಾಧ್ಯಕ್ಷ ವಿಕಾರ್‌ ರಸೂಲ್ ವಾನಿ ಅವರು ಯತ್ನಿಸುತ್ತಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಕೋರಿ ವಿವಿಧ ಜಿಲ್ಲೆಗಳ ಮುಖಂಡರು ಪಕ್ಷದ ಮುಖಂಡರನ್ನು ಶನಿವಾರ ಒತ್ತಾಯಿಸಿದ್ದಾರೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (JKPCC)ಯ ಮೂಲಗಳ ಪ್ರಕಾರ, ಪಕ್ಷದಲ್ಲಿ ವಿಫಲ ನಾಯಕ ಎಂದೇ ಗುರುತಿಸಲಾಗಿರುವ ಗುಲಾಮ್ ನಬಿ ಮೊಂಬಾ ಅವರನ್ನು ಬಳಸಿಕೊಂಡು ವಾನಿ ಅವರು ಪಕ್ಷವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್‌ ಜತೆಗಿನ ಮೈತ್ರಿ ಹಾಗೂ ಕಾಂಗ್ರೆಸ್‌ ಪಕ್ಷದ ನಿರ್ಧಾರಗಳ ಕುರಿತು ಪ್ರಶ್ನಿಸುವಂತೆ ಇತರರನ್ನು ಪ್ರೇರೇಪಿಸುತ್ತಿದ್ದಾರೆ. ಇವರು ಅಧ್ಯಕ್ಷ ಹುದ್ದೆಗೆ ಅನರ್ಹರು. ಇದನ್ನು ಪರಿಗಣಿಸಿ ತಕ್ಷಣದಿಂದಲೇ ಇವರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಬೇಕು’ ಎಂದು ಒತ್ತಾಯಿಸಲಾಗಿದೆ.

‘ಪಕ್ಷದ ನಿರ್ಧಾರಗಳನ್ನು ವಿವಿಧ ವೇದಿಕೆಗಳಲ್ಲಿ ಪ್ರಶ್ನಿಸುವಂತೆ ಹಲವರಿಗೆ ಕರೆ ಮಾಡಿ ವಾನಿ ಸೂಚಿಸಿರುವುದು ಉನ್ನತ ನಾಯಕರಿಗೆ ಮನವರಿಕೆಯಾಗಿದೆ. ಇವರ ಈ ವರ್ತನೆಯು ಪಕ್ಷದ ನೀತಿ ಹಾಗೂ ಕಾರ್ಯಕ್ರಮಗಳಿಗೆ ವಿರುದ್ಧವಾಗಿವೆ. ಜತೆಗೆ ಮೊಂಗಾ ಕೂಡಾ ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ. ಇವರಿಗೆ ಸಾರ್ವಜನಿಕ ವಲಯದಲ್ಲಿ ಯಾವುದೇ ಮನ್ನಣೆಯೂ ಇಲ್ಲ. ಬಾರಾಮುಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 400 ಮತಗಳನ್ನು ಗಳಿಸಿದ್ದೇ ಮೊಂಗಾ ಅವರ ಜೀವಮಾನ ಸಾಧನೆ. ಪಂಚಾಯ್ತಿ ಚುನಾವಣೆಯನ್ನೂ ಗೆಲ್ಲಲು ಸಾಧ್ಯವಿಲ್ಲದ ಇವರ ವಿರುದ್ಧ ಪಕ್ಷ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಮುಖಂಡರು ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ತಾರೀಖ್‌ ಹಮೀದ್ ಕಾರಾ ಅವರ ನಾಯಕತ್ವ ಕುರಿತು ಎಲ್ಲರಿಗೂ ಸಹಮತವಿದೆ. ಅವರ ನಾಯಕತ್ವದಲ್ಲಿ ಪಕ್ಷವು ರಾಜ್ಯದಲ್ಲಿ ಬೆಳವಣಿಗೆ ಕಾಣುವ ಭರವಸೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಪಕ್ಷದ ಪರಿಸ್ಥಿತಿ ಅರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ’ ಎಂದು ಮುಖಂಡರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.