ನವದೆಹಲಿ: ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವಂತಿಲ್ಲ ಎಂದು ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಿದ್ದಾರೆ. ಆದರೆ, ಕರ್ನಾಟಕದಲ್ಲಿ ಖಾಸಗಿ ಗುತ್ತಿಗೆದಾರರಿಗೆ ಟೆಂಡರ್ ಒದಗಿಸುವಾಗ ಶೇ 4ರಷ್ಟು ಮೀಸಲಾತಿಯನ್ನು ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ನೀಡುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.
ನವಿ ಮುಂಬೈನಲ್ಲಿ ಚುನಾವಣಾ ರ‍್ಯಾಲಿ ವೇಳೆ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನದ ವಿಷಯದಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಂದು ರಾಹುಲ್ ಗಾಂಧಿ ಸಂವಿಧಾನದ ಪುಸ್ತಕದೊಂದಿಗೆ ತಿರುಗಾಡುತ್ತಿದ್ದಾರೆ. ಆದರೆ, ಅವರು ಸಂವಿಧಾನವನ್ನೇ ಓದಿಲ್ಲ’ ಎಂದರು.
ಎನ್‌ಡಿಎ ಹಾಗೂ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಮಹಾರಾಷ್ಟ್ರದಲ್ಲಿ ಹೊಸ ಸಂಸ್ಕೃತಿ ಹಾಗೂ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ರಾಜಕೀಯದ ಹೊಸ ವ್ಯಾಖ್ಯಾನ ಬರೆದಿದೆ. ‘ನಾವು ಜನರಿಗೆ ಉತ್ತರದಾಯಿತ್ವದ ಸರ್ಕಾರವನ್ನು ನೀಡುತ್ತಿದ್ದೇವೆ. ನಾವು ಹೇಳಿದ್ದನ್ನು ಮಾಡುವಂಥ ರಾಜಕೀಯ ಮಾಡುತ್ತಿದ್ದೇವೆ. ನಾವು ಹೇಳದೇ ಇರುವುದನ್ನೂ ಮಾಡಿದ್ದೇವೆ’ ಎಂದು ನಡ್ಡಾ ಹೇಳಿದರು.
‘ಭಾರತದ ಆರ್ಥಿಕತೆಯು ಹತ್ತು ವರ್ಷಗಳ ಹಿಂದೆ 12ನೇ ಅತಿ ದೊಡ್ಡ ಆರ್ಥಿಕತೆ ಎನಿಸಿತ್ತು. ಮೋದಿ ಅವರು ಅದನ್ನೀಗ ಐದನೇ ಸ್ಥಾನಕ್ಕೆ ತಂದಿದ್ದಾರೆ. ನೀವು ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವನ್ನು ರಚಿಸಲು ಅನುವು ಮಾಡಿಕೊಟ್ಟರೆ ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಲಿದೆ’ ಎಂದು ಹೇಳಿದರು.
‘ಬಾಳಾಸಾಹೇಬ್ ಠಾಕ್ರೆ ಅವರು ನನ್ನ ಪಕ್ಷವನ್ನು ವಿಸರ್ಜಿ ಸುತ್ತೇನೆಯೇ ಹೊರತು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿ ಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ, ಇಂದು ಉದ್ಧವ್ ಠಾಕ್ರೆ ಅವರು ಅಧಿಕಾರಕ್ಕಾಗಿ ಕಾಂಗ್ರೆಸ್ ಮಡಿಲಿನಲ್ಲಿದ್ದಾರೆ. ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಬಾಳಾಸಾಹೇಬ್ ಠಾಕ್ರೆ ಅವರ ವಿಚಾರಗಳನ್ನು ಮುಂದುವರೆಸುತ್ತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.