ADVERTISEMENT

ಹರಿಯಾಣ | ₹500ಕ್ಕೆ ಅಡುಗೆ ಅನಿಲ, ಮಹಿಳೆಯರಿಗೆ ₹2,100 ಭರವಸೆ: BJP ಪ್ರಣಾಳಿಕೆ

ಪಿಟಿಐ
Published 19 ಸೆಪ್ಟೆಂಬರ್ 2024, 7:40 IST
Last Updated 19 ಸೆಪ್ಟೆಂಬರ್ 2024, 7:40 IST
   

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿ, ಮಹಿಳೆಯರಿಗೆ ಪ್ರತಿ ತಿಂಗಳಿಗೆ ₹2,100 ನೀಡುವುದಾಗಿ ಭರವಸೆ ನೀಡಿದೆ.

ಯುವಕರಿಗೆ ಒಟ್ಟು ಎರಡು ಲಕ್ಷ ಸರ್ಕಾರಿ ನೌಕರಿ, ರಾಜ್ಯದ ‘ಅಗ್ನಿವೀರ’ರಿಗೆ ಖಾತರಿಯಾಗಿ ಸರ್ಕಾರಿ ನೌಕರಿ ಒದಗಿಸುವ ಭರವಸೆ ಕೂಡ ಬಿಜೆಪಿ ಪ್ರಣಾಳಿಕೆಯಲ್ಲಿ ಇದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಅವರ ಸಮ್ಮುಖದಲ್ಲಿ ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯನ್ನು ರೋಹಟಕ್‌ನಲ್ಲಿ ಬಿಡುಗಡೆ ಮಾಡಿದರು.

ADVERTISEMENT

ರಾಜ್ಯದಲ್ಲಿ ಸತತವಾಗಿ ಮೂರನೆಯ ಅವಧಿಗೆ ಅಧಿಕಾರ ಹಿಡಿಯುವ ಉಮೇದಿನಲ್ಲಿ ಇರುವ ಬಿಜೆಪಿ, 24 ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುವ ಭರವಸೆ ನೀಡಿದೆ.

ಕಾಂಗ್ರೆಸ್ ಪಕ್ಷದ ಪಾಲಿಗೆ ಚುನಾವಣಾ ಪ್ರಣಾಳಿಕೆ ಎಂಬುದು ಶಿಷ್ಟಾಚಾರ ಮಾತ್ರ. ಅದನ್ನು ಬಳಸಿ ಆ ಪಕ್ಷವು ಜನರನ್ನು ವಂಚಿಸುತ್ತದೆ ಎಂದು ನಡ್ಡಾ ಆರೋಪಿಸಿದರು. 

‘ನಾವು ಅಡೆತಡೆಗಳು ಇಲ್ಲದ ಹರಿಯಾಣದ ಬಗ್ಗೆ ಮಾತನಾಡಿದ್ದೇವೆ. ರಾಜ್ಯವು ಬಿಜೆಪಿ ಆಡಳಿತದ ಅವಧಿಯಲ್ಲಿ ಪ್ರಗತಿಯ ಹಾದಿಯಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತ ಇದ್ದಾಗ ಜಾರಿಯಲ್ಲಿದ್ದ ಖರ್ಚಿ–ಪರ್ಚಿ (ಕಾಂಗ್ರೆಸ್ ಆಡಳಿತ ಇದ್ದಾಗಿನ ನಡೆಯುತ್ತಿತ್ತು ಎನ್ನಲಾದ ಭ್ರಷ್ಟಾಚಾರದ ಕುರಿತ ಉಲ್ಲೇಖ) ವ್ಯವಸ್ಥೆ ಕೊನೆಗೊಂಡಿದೆ’ ಎಂದು ನಡ್ಡಾ ಹೇಳಿದರು.

ಬಿಜೆಪಿಯು ಯಾವುದೇ ಭರವಸೆಗಳನ್ನು ನೀಡುವ ಮೊದಲು ಬಜೆಟ್ ಹಾಗೂ ಸಂಪನ್ಮೂಲಗಳ ಬಗ್ಗೆ ಗಮನ ನೀಡುತ್ತದೆ. ಆದರೆ ವಿರೋಧ ಪಕ್ಷಗಳು ಬಜೆಟ್‌ ಬಗ್ಗೆ ಗಮನ ನೀಡದೆಯೇ ಭರವಸೆಗಳನ್ನು ನೀಡುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಒ.ಪಿ. ಧನಕರ್ ಹೇಳಿದರು.

ಬಿಜೆಪಿಯ ಪ್ರಮುಖ ಭರವಸೆಗಳು
  • ₹ 500ಕ್ಕೆ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್

  • ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 5 ಲಕ್ಷ ಮನೆಗಳ ನಿರ್ಮಾಣ

  • ಕಾಲೇಜಿಗೆ ಹೋಗುವ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಸ್ಕೂಟರ್

  • ಒಬಿಸಿ ಎಸ್‌ಸಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ದೇಶದ ಯಾವುದೇ ಸರ್ಕಾರಿ ವೈದ್ಯಕೀಯ ಅಥವಾ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ನಡೆಸಲು ವಿದ್ಯಾರ್ಥಿವೇತನ

  • ಪ್ರತಿ ನಗರದಲ್ಲಿ 50 ಸಾವಿರ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವುದಕ್ಕೆ ಉದ್ಯಮಿಗಳಿಗೆ ಉತ್ತೇಜನ ನೀಡಲಾಗುತ್ತದೆ.

  • ಪ್ರತಿ ಕುಟುಂಬಕ್ಕೆ ₹10 ಲಕ್ಷದವರೆಗೆ ಉಚಿತ ಚಿಕಿತ್ಸೆ. ಹಿರಿಯ ನಾಗರಿಕರಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.