ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಹಿಂಪಡೆದಿದ್ದಾರೆ.
ಸುಖೇಶ್ ಚಂದ್ರಶೇಖರ್ ಎಂಬುವವರ ವಿರುದ್ಧದ ₹200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಜಾಕ್ವೆಲಿನ್ ವಿದೇಶ ಪ್ರಯಾಣವನ್ನು ಜಾರಿ ನಿರ್ದೇಶನಾಲಯದ(ಇಡಿ) ಪರ ವಕೀಲರು ವಿರೋಧಿಸಿದ್ದರು.
‘ಆಕೆ ನಟಿ ಮತ್ತು ವಿದೇಶಿ ಪ್ರಜೆ. ವಿಚಾರಣೆ ನಿರ್ಣಾಯಕ ಹಂತದಲ್ಲಿದೆ. ಹೀಗಾಗಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಬಾರದು’ ಎಂದು ಇಡಿ ಪರ ವಕೀಲರು ವಾದಿಸಿದ್ದರು.
ಇಡಿ ವಿಚಾರಣೆಯನ್ನೇ ಪೂರೈಸಿಲ್ಲ ಎಂದು ಜಾಕ್ವೆಲಿನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ–ವಿವಾದ ಆಲಿಸಿದ ನ್ಯಾಯಾಧೀಶ ಶೈಲೇಂದ್ರ ಮಲ್ಲಿಕ್, ಅರ್ಜಿ ಹಿಂಪಡೆಯುತ್ತಿರಾ ಅಥವಾ ನ್ಯಾಯಾಲಯದ ಆದೇಶದವರೆಗೆ ಕಾಯುವಿರೋ ಎಂದು ಆಕೆಯ ಪರ ವಕೀಲರನ್ನು ಕೇಳಿದ್ದಾರೆ. ಆಗ ಅವರು ಅರ್ಜಿ ಹಿಂಪಡೆಯಲು ಒಪ್ಪಿದ್ದಾರೆ.
ಡಿ.23ರಂದು ಬಹರೈನ್‌ಗೆ ಪ್ರಯಾಣಿಸಲು ಅನುಮತಿ ಕೋರಿ ಜಾಕ್ವೆಲಿನ್ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯಿಸುವಂತೆ ಡಿ.20ರಂದು ನ್ಯಾಯಾಧೀಶ ಶೈಲೇಂದ್ರ ಮಲ್ಲಿಕ್ ಇಡಿಗೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.