ಅಮರಾವತಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರ ಅಧಿಕೃತ ನಿವಾಸಕ್ಕೆ ಅಲ್ಯುಮಿನಿಯಂ ಕಿಟಕಿ, ಬಾಗಿಲು ಇತ್ಯಾದಿ ಕೂರಿಸಲು ₹ 73 ಲಕ್ಷ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ಮತ್ತು ಜನರು ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಯ ಅಧಿಕೃತ ನಿವಾಸಕ್ಕೆ ಭಾರಿ ಭದ್ರತೆ ಇದೆ. ಗುಂಟೂರು ಜಿಲ್ಲೆಯ ತಾಡೇಪಲ್ಲಿಯಲ್ಲಿರುವ ಈ ಮನೆಯನ್ನು ಫೆಬ್ರುವರಿ 27ರಂದು ಉದ್ಘಾಟನೆ ಮಾಡಲಾಗಿತ್ತು.
ಮೇ 30ರಂದು ಜಗನ್ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈಗ ಅವರು ಕುಟುಂಬದ ಜತೆಗೆ ತಾಡೇಪಲ್ಲಿ ನಿವಾಸದಲ್ಲಿ ನೆಲೆಸಿದ್ದಾರೆ. ಕಳೆದ ಆರು ತಿಂಗಳ ಅವಧಿಯಲ್ಲಿ ಈ ನಿವಾಸದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಭದ್ರತೆ ಮತ್ತು ಅನುಕೂಲದ ಕಾರಣಕ್ಕಾಗಿ ಈ ಮಾರ್ಪಾಡುಗಳು ನಡೆದಿವೆ.
ಈ ಎಲ್ಲ ಮಾರ್ಪಾಡುಗಳಿಗೆ ಸರ್ಕಾರದ ಬೊಕ್ಕಸದಿಂದಲೇ ಹಣ ಪಾವತಿಯಾಗಿದೆ. ಕಿಟಕಿ, ಬಾಗಿಲು ಮತ್ತು ಇತರ ಸಾಧನಗಳ ಅಳವಡಿಕೆಗೆ ರಾಜ್ಯದ ರಸ್ತೆ ಮತ್ತು ಕಟ್ಟಡ ಇಲಾಖೆಯು ಅಕ್ಟೋಬರ್ 15ರಂದು ₹ 73 ಲಕ್ಷ ಹಣ ಪಾವತಿಸಿದೆ.
ಕಿಟಕಿಗಳಿಗಾಗಿಯೇ ₹ 73 ಲಕ್ಷ ವೆಚ್ಚ ಮಾಡುವ ಬದಲು ಮುಖ್ಯಮಂತ್ರಿ ಹೊಸ ಮನೆಯನ್ನೇ ಕಟ್ಟಿಸಬಹುದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಕಿಟಕಿಗಳಿಗೆ ಕೆಲವೇ ಸಾವಿರ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇಲ್ಲವೇ ಇಲ್ಲ. ಎಲ್ಲ ರೀತಿಯಲ್ಲಿಯೂ ಪೂರ್ಣಗೊಂಡಿರುವ ಮನೆಗೆ ಮತ್ತೆ ಈ ರೀತಿಯಲ್ಲಿ ಖರ್ಚು ಮಾಡುವುದು ತೆರಿಗೆದಾರರ ಹಣದ ಪೋಲು ಅಲ್ಲದೆ ಬೇರೇನಲ್ಲ ಎಂದು ಜಾಲತಾಣಗಳಲ್ಲಿ ಹೇಳಲಾಗಿದೆ.
ಮುಖ್ಯಮಂತ್ರಿ ನಿವಾಸದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಜೂನ್ 26ರಂದು ರಾಜ್ಯ ಸರ್ಕಾರವು ₹ 1.89 ಕೋಟಿ ಮಂಜೂರು ಮಾಡಿದೆ. ಮುಖ್ಯಮಂತ್ರಿಯ ತಾಡೇಪಲ್ಲಿ ನಿವಾಸಕ್ಕೆ ಹೋಗುವ ರವೀಂದ್ರಪಾಡು–ಸೀತಾನಗರಂ ರಸ್ತೆಯನ್ನು ಅಗಲ ಮತ್ತು ಗಟ್ಟಿ ಮಾಡಲು ಜೂನ್ 25ರಂದು ₹ 5 ಕೋಟಿ ಬಿಡುಗಡೆ ಮಾಡಲಾಗಿದೆ.
ನಾಯ್ಡು ಅವರ ಟೀಕೆಗೆ ಜಗನ್ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ತಿರುಗೇಟು ನೀಡಿದೆ. ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕಚೇರಿಯನ್ನು ಆಗಾಗ ಬದಲಾಯಿಸಲು ಮತ್ತು ನವೀಕರಿಸಲು ₹ 80 ಕೋಟಿ ವೆಚ್ಚ ಮಾಡಿದ್ದನ್ನು ಮರೆಯಬಾರದು ಎಂದು ವೈಎಸ್‌ಆರ್ ಕಾಂಗ್ರೆಸ್ ಹೇಳಿದೆ.
ಆಂಧ್ರ ಪ್ರದೇಶವು ವಿಭಜನೆ ಗೊಂಡಾಗ ನಾಯ್ಡು ಅವರು ರಾಜಭವನ ರಸ್ತೆಯ ದಿಲ್‌ಕುಶಾ ಅತಿಥಿಗೃಹದಿಂದ ಕಾರ್ಯನಿರ್ವಹಿಸಿದ್ದರು. ಬಳಿಕ, ಅವರು ತೆಲಂಗಾಣ ವಿಧಾನಸಭಾ ಸಚಿವಾಲಯಕ್ಕೆ ಕಾರ್ಯಾಚರಣೆಯನ್ನು ಸ್ಥಳಾಂತರಿಸಿದರು.
ಅಲ್ಲಿ ಎರಡು ಕಚೇರಿಗಳನ್ನು ನಾಯ್ಡು ಅವರಿಗಾಗಿ ಸಿದ್ಧಪಡಿಸಲಾಗಿತ್ತು. ನಂತರ ಇದನ್ನು ತೊರೆದು ಅವರು ಅಮರಾವತಿಗೆ ಹೋದರು. ರಾಜಧಾನಿಯು ಹೈದರಾಬಾದ್‌ನಿಂದ ಅಮರಾವತಿಗೆ ಸ್ಥಳಾಂತರಗೊಂಡ ಸಂದರ್ಭದಲ್ಲಿ ವಿಜಯವಾಡದಲ್ಲಿದ್ದ ಮುಖ್ಯಮಂತ್ರಿ ಕಚೇರಿಯು ಈಗ ರಾಜಭವನವಾಗಿದೆ.
ನಾಯ್ಡು ಟ್ವೀಟ್
ಜಗನ್ ಅವರ ಮನೆಯ ಕಿಟಕಿ ಸರಿಮಾಡಲು ಸರ್ಕಾರದಿಂದ ₹ 73 ಲಕ್ಷ ಮಂಜೂರಾಗಿದೆ. ಸರ್ಕಾರದ ಬೊಕ್ಕಸದ ವೆಚ್ಚದಲ್ಲಿ ಕಿಟಕಿಯಾಚೆಗಿನ ದುಬಾರಿ ನೋಟ ಇದು. ಐದು ತಿಂಗಳಲ್ಲಿನ ದುರಾಡಳಿತದಿಂದಾಗಿ ಆಂಧ್ರದ ಆರ್ಥಿಕ ಸ್ಥಿತಿಯೇ ಗೋಜಲಯಮಯವಾಗಿರುವ ಸಂದರ್ಭದಲ್ಲಿ ಇಂತಹ ವೆಚ್ಚ!
-ಚಂದ್ರಬಾಬು ನಾಯ್ಡು, ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.