ADVERTISEMENT

ಪ್ರಧಾನಿ ಮೋದಿ ಭೇಟಿ ಮಾಡಿದ ಜಗನ್ ಮೋಹನ್ ರೆಡ್ಡಿ 

​ಪ್ರಜಾವಾಣಿ ವಾರ್ತೆ
Published 26 ಮೇ 2019, 10:28 IST
Last Updated 26 ಮೇ 2019, 10:28 IST
   

ನವದೆಹಲಿ:ವೈಎಸ್‌‌ಆರ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಆಂಧ್ರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ವೈ.ಎಸ್. ಜಗನ್‌ ಮೋಹನ್ ರೆಡ್ಡಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ.

ಲೋಕ ಕಲ್ಯಾಣ್ ರಸ್ತೆಯಲ್ಲಿರುವ ಪ್ರಧಾನಿಯವರ ನಿವಾಸದಲ್ಲಿ ಭೇಟಿಯಾದ ಜಗನ್, ಆಂಧ್ರ ಪ್ರದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ವಿವರಿಸಿ ಕೇಂದ್ರ ಸರ್ಕಾರದ ಸಹಾಯವನ್ನು ಕೋರಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನಾನು ಇದೇ ಮೊದಲ ಬಾರಿ ಪ್ರಧಾನಿಯವರನ್ನು ಭೇಟಿಯಾಗಿದ್ದೇನೆ.ಈ ಐದು ವರ್ಷಗಳಲ್ಲಿ ನಾನು 30,40 ಅಥವಾ 50 ಬಾರಿ ಭೇಟಿಯಾದರೂ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆಯೇ ನೆನಪಿಸಲಿದ್ದೇನೆ. ನಾವು ಈ ರೀತಿ ನೆನೆಪಿಸುತ್ತಿದ್ದಂತೆ ಬದಲಾವಣೆಯೂ ಸಾಧ್ಯವಾಗಲಿದೆ.ಚಂದ್ರಬಾಬು ನಾಯ್ಡು ವಿರುದ್ಧ ನಾನು ಕೆಲಸ ಮಾಡುತ್ತಿಲ್ಲ.ನಾನು ರಕ್ಷಕನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಮ್ಮ ಸರ್ಕಾರ ಕ್ರಾಂತಿಕಾರಿ ಆಗಿರುತ್ತದೆ. ಆರು ತಿಂಗಳು ಅಥವಾ ವರ್ಷದೊಳಗೆ ದೇಶಕ್ಕೇ ಮಾದರಿ ಎನಿಸುವ ರೀತಿಯಲ್ಲಿ ನಮ್ಮ ಸರ್ಕಾರ ಕಾರ್ಯವೆಸಗುತ್ತದೆ ಎಂದು ಎಂದು ಜಗನ್ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ 175 ಸೀಟುಗಳ ಪೈಕಿ 152 ಸೀಟುಗಳನ್ನು ಗೆದ್ದುಕೊಂಡಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ರಾಜಕೀಯ ಪಕ್ಷಕ್ಕೆ ತಾವು ರಾಷ್ಟ್ರ ಮಟ್ಟದಲ್ಲಿ ಬೆಂಬಲ ನೀಡುತ್ತೇವೆ ಎಂದು ಚುನಾವಣಾ ಪ್ರಚಾರದ ವೇಳೆ ಜಗನ್ ಭರವಸೆ ನೀಡಿದ್ದರು.

ಜಗನ್ ಜತೆಗಿನಭೇಟಿ ಮುಗಿದ ನಂತರ ಇದೊಂದು ಫಲಪ್ರದವಾದ ಮಾತುಕತೆಯಾಗಿತ್ತು ಎಂದು ಮೋದಿ ಟ್ವೀಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.