ADVERTISEMENT

ಆಂಧ್ರಪ್ರದೇಶ: ವಿವಾದ ಹುಟ್ಟುಹಾಕಿದ ‘ಜಗನ್‌ ಅರಮನೆ’

ವಿಶಾಖಪಟ್ಟಣದ ರುಷಿಕೊಂಡದ ನೆತ್ತಿಯಲ್ಲಿ ಐಷಾರಾಮಿ ಬಂಗಲೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ವಿಶಾಖಪಟ್ಟಣದ ರುಷಿಕೊಂಡದಲ್ಲಿ ನಿರ್ಮಿಸಲಾಗಿರುವ ಐಷಾರಾಮಿ ಬಂಗಲೆ
ವಿಶಾಖಪಟ್ಟಣದ ರುಷಿಕೊಂಡದಲ್ಲಿ ನಿರ್ಮಿಸಲಾಗಿರುವ ಐಷಾರಾಮಿ ಬಂಗಲೆ   

ಹೈದರಾಬಾದ್‌: ಆಂಧ್ರಪ್ರದೇಶದ ವಿಶಾಖಪಟ್ಟಣದ ರುಷಿಕೊಂಡದ ನೆತ್ತಿಯಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ನಿರ್ಮಿಸಿರುವ ವೈಭವೋಪೇತ ‘ಅರಮನೆ’ಯು ಈಗ ಆಂಧ್ರದಲ್ಲಿ ವಿವಾದ ಹುಟ್ಟುಹಾಕಿದೆ.   

ಈ ಐಷಾರಾಮಿ ಕಟ್ಟಡವನ್ನು ರೆಸಾ‌ರ್ಟ್‌ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ವಾಸ್ತವವಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಗೆದ್ದಿದ್ದರೆ ಅವರ ವಾಸದ ಉದ್ದೇಶಕ್ಕಾಗಿ ಇದನ್ನು ನಿರ್ಮಿಸಲಾಗಿದೆ. ಹಾಗಾಗಿ, ಈ ‘ಅರಮನೆ’ ಈಗ ವಿವಾದದ ಮೂಲವಾಗಿದೆ. 

ಲಕ್ಷಾಂತರ ರೂಪಾಯಿ ಮೌಲ್ಯದ ಬಾತ್‌ಟಬ್‌, ಕಮೋಡ್‌ಗಳನ್ನು ಅಳವಡಿಸಿರುವ ಐಷಾರಾಮಿ ಸ್ನಾನಗೃಹಗಳನ್ನು ಹೊಂದಿರುವ ಈ ವಿಲಾಸಿ ಬಂಗಲೆಯನ್ನು ತುಂಬಾ ರಹಸ್ಯವಾಗಿ ₹500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ADVERTISEMENT

‘ಜಗನ್‌ ಅವರ ಶೋಕಿಗಾಗಿ ಹಿಂದಿನ ಸರ್ಕಾರ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ’ ಎಂದು ಆಡಳಿತಾರೂಢ ಟಿಡಿಪಿ ಹೇಳಿದೆ. 

‘ಅದು ಸರ್ಕಾರದ ಆಸ್ತಿಯಾಗಿದ್ದು, ಹಾಲಿ ಸರ್ಕಾರ ಸಾರ್ವಜನಿಕ ಉದ್ದೇಶಗಳಿಗೆ ಈ ಕಟ್ಟಡವನ್ನು ಬಳಸಬಹುದು’ ಎಂದು ವೈಎಸ್ಆರ್‌ಸಿಪಿ ಪ್ರತಿಕ್ರಿಯಿಸಿದೆ. 

ಎರಡು ದಿನಗಳ ಹಿಂದೆ ಮಾಜಿ ಸಚಿವ, ಟಿಡಿಪಿಯ ಶಾಸಕ ಗಂಟಾ ಶ್ರೀನಿವಾಸ ರಾವ್‌ ಅವರು, ರಾಷ್ಟ್ರ, ರಾಜ್ಯದ ಮುಖ್ಯಸ್ಥರು ತಂಗಬಹುದಾದ ಈ ಬಂಗಲೆಯ ಬಾಗಿಲನ್ನು ತೆರೆದಾಗ ಅಚ್ಚರಿಗೆ ಒಳಗಾಗಿದ್ದರು.    

ತಾವು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ವಿಶಾಖಪಟ್ಟಣದಲ್ಲಿ ಮತ್ತೆ ಪ್ರಮಾಣ ವಚನ ಸ್ವೀಕರಿಸುವುದಾಗಿ ಜಗನ್‌ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು.

ತಮ್ಮ ಅವಧಿಯಲ್ಲಿ ಆಂಧ್ರಪ್ರದೇಶವು ಮೂರು ರಾಜಧಾನಿಗಳನ್ನು ಹೊಂದಿರಲಿದೆ. ಅವುಗಳಲ್ಲಿ ವಿಶಾಖಪಟ್ಟಣವೂ ಒಂದಾಗಿರಲಿದೆ ಎಂದು ಹೇಳಿದ್ದ ಅವರು, ಇದನ್ನು ಕಾರ್ಯಾಂಗದ ರಾಜಧಾನಿ ಎಂದು ಕರೆದಿದ್ದರು. 

ರೆಸಾರ್ಟ್‌ ಜಾಗದಲ್ಲಿ ನಿರ್ಮಾಣ: ಆಂಧ್ರಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 2021ರಲ್ಲಿ ರುಷಿಕೊಂಡದ ತುದಿಯಲ್ಲಿದ್ದ ಹರಿತಾ ರೆಸಾರ್ಟ್‌ ಅನ್ನು ನೆಲಸಮಗೊಳಿಸಿ ಹೊಸ ರೆಸಾರ್ಟ್‌ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿತ್ತು. ಈ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಅಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ, ಹೋರಾಟ ನಡೆಸುತ್ತಾ ಬಂದಿದ್ದವು. 

ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದ್ದ ಟಿಡಿಪಿ, ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ಪ್ರತಿಭಟನೆ ನಡೆಸಲು ಹಲವು ಬಾರಿ ಯತ್ನಿಸಿತ್ತು. 

ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್ ಅವರು ವಿರೋಧ ಪಕ್ಷದಲ್ಲಿದ್ದಾಗ ರುಷಿಕೊಂಡಕ್ಕೆ ಭೇಟಿ ನೀಡಲು ಯತ್ನಿಸಿದ್ದರು. ಇದನ್ನು ತಡೆಯಲು ಅಂದಿನ ಸರ್ಕಾರ ಭದ್ರತಾ ಪಡೆಗಳನ್ನು ಬಳಸಿತ್ತು. 

ಬೆಟ್ಟದ ಮೇಲಿರುವ 61 ಎಕರೆ ವಿಸ್ತೀರ್ಣದ ಜಾಗದ ಪೈಕಿ 9.8 ಎಕರೆ ಪ್ರದೇಶದಲ್ಲಿ ರೆಸಾರ್ಟ್‌ ಇದೆ. 19,967.97 ಚದರ ಮೀಟರ್‌ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗಿದೆ.

ವಿಲಾಸಿ ಕಟ್ಟಡದ ಸ್ನಾನಗೃಹದಲ್ಲಿ ಅಳವಡಿಸಿರುವ ದುಬಾರಿ ಬಾತ್‌ ಟಬ್
ಕಟ್ಟಡದ ಒಳಾಂಗಣದ ನೋಟ

ಬಂಗಲೆಯಲ್ಲಿ ಏನೇನಿದೆ?

ಪುನರ್‌ನಿರ್ಮಾಣಗೊಂಡ ಬಂಗಲೆಯಲ್ಲಿ ಖಾಸಗಿ ವಿಲಾಸಿ ವಿಲ್ಲಾಗಳು ಬೀಚ್‌ನತ್ತ ಮುಖ ಮಾಡಿರುವ ವಿಶಾಲ ಕೊಠಡಿಗಳು ಪ್ರಧಾನ ಕೊಠಡಿಗಳು ಅತಿಥಿಗಳಿಗೆ ಮೀಸಲಾಗಿರುವ ವಿಶಾಲ ಕೋಣೆಗಳು ಭೋಜನ ಸಭಾಂಗಣ ಕೆಫೆಟೇರಿಯಾ ಜಿಮ್ನಾಶಿಯಂ ಸೌಲಭ್ಯಗಳು ಈಜುಕೊಳಗಳು ಬಾಂಕ್ವೆಟ್‌ ಹಾಲ್‌ ಭದ್ರತಾ ವ್ಯವಸ್ಥೆಗೆ ಸ್ಥಳಾವಕಾಶ ಕಚೇರಿಗಳಿಗೆ ವ್ಯವಸ್ಥೆ ಅಡುಗೆ ಕೋಣೆ ಸೇರಿದಂತೆ ಹಲವು ಸೌಲಭ್ಯಗಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.