ADVERTISEMENT

ಜಗದೀಪ್‌ ಧನಕರ್ ರಾಜಸ್ಥಾನದ ಹಳ್ಳಿಯಿಂದ ಉಪರಾಷ್ಟ್ರಪತಿ ಸ್ಥಾನಕ್ಕೆ

ಪಿಟಿಐ
Published 6 ಆಗಸ್ಟ್ 2022, 21:00 IST
Last Updated 6 ಆಗಸ್ಟ್ 2022, 21:00 IST
ಜಗದೀಪ್‌ ಧನಕರ್
ಜಗದೀಪ್‌ ಧನಕರ್   

ನವದೆಹಲಿ: ‘ರಾಜಕೀಯವೇ ಬೇಡ’ ಎಂದು ದೂರವೇ ಉಳಿಯಲು ನಿರ್ಧರಿಸಿದ್ದ ಜಗದೀಪ್‌ ಧನಕರ್ ಅವರು 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾದದ್ದು, ಈಗ ಉಪರಾಷ್ಟ್ರಪತಿ ಹುದ್ದೆಗೆ ಏರಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ.

ಹಲವು ಹತ್ತು ಹವ್ಯಾಸಗಳನ್ನು ಹೊಂದಿರುವ ಧನಕರ್‌, ರಾಜಸ್ಥಾನ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘ ಕಾಲ ವಕೀಲಿ ವೃತ್ತಿ ಮಾಡಿದ್ದಾರೆ. ಸ್ವಲ್ಪ ಕಾಲ ಅವರು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆಯ ಸಚಿವರಾಗಿಯೂ ಇದ್ದರು. ಈ ಎಲ್ಲವೂ ರಾಜ್ಯಸಭೆ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಅವರಿಗೆ ನೆರವಾಗಬಹುದು.

ರಾಜಸ್ಥಾನದ ಕಿಠಾನಾ ಎಂಬ ಸಣ್ಣ ಗ್ರಾಮದಲ್ಲಿ 1951ರ ಮೇ 18ರಂದು ಧನಕರ್ ಜನಿಸಿದರು. ಜೈಪುರದ ಮಹಾರಾಜ ಕಾಲೇಜಿನಿಂದ ಭೌತ ವಿಜ್ಞಾನದಲ್ಲಿ ಪದವಿ ಪಡೆದ ಬಳಿಕ ಜೈಪುರ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿಯೇ ಆರಂಭಿಸಿದರೂ ಬಳಿಕ ಶಿಷ್ಯವೇತನ ಪಡೆದು ಚಿತ್ತೋರಗಡದಸೈನಿಕ ಶಾಲೆಗೆ ಸೇರಿಕೊಂಡರು.

ADVERTISEMENT

1979ರ ನವೆಂಬರ್‌ನಲ್ಲಿ ರಾಜಸ್ಥಾನ ವಕೀಲರ ಸಂಘದಲ್ಲಿ ವಕೀಲರಾಗಿ ಹೆಸರು ನೋಂದಣಿ ಮಾಡಿಕೊಂಡರು. 1987ರಲ್ಲಿ ರಾಜಸ್ಥಾನ ವಕೀಲರ ಸಂಘದ ಅಧ್ಯಕ್ಷರಾಗಿಯೂ ಆಯ್ಕೆ
ಯಾದರು.

1989ರಲ್ಲಿ ರಾಜಸ್ಥಾನದ ಝುಂಝುನು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆಲ್ಲುವ ಮೂಲಕ ಅವರ ರಾಜಕೀಯ ಪ್ರವೇಶ ನಡೆಯಿತು. ಆಗ ಅವರು ಜನತಾ ದಳದಲ್ಲಿದ್ದರು. ಚಂದ್ರಶೇಖರ್ ನೇತೃತ್ವದ ಸರ್ಕಾರದಲ್ಲಿ 1990ರಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆಯ ಸಚಿವರಾದರು. 1993ರಿಂದ 1998ರವರೆಗೆ ಅವರು ರಾಜಸ್ಥಾನ ವಿಧಾನಸಭೆಯ ಸದಸ್ಯರೂ ಆಗಿದ್ದರು. ನಂತರದ ದಿನಗಳಲ್ಲಿ ಅವರು ಕಾಂಗ್ರೆಸ್‌ಗೆ ಸೇರಿದರು. 2008ರಲ್ಲಿ ಬಿಜೆಪಿ ಸೇರುವ ಮುನ್ನ ಒಂದು ದಶಕ ಕಾಲ ರಾಜಕೀಯದಿಂದ ದೂರವಿದ್ದರು.

ರಾಜಸ್ಥಾನ ರಾಜಕಾರಣದಲ್ಲಿ ಅಶೋಕ್‌ ಗೆಹಲೋತ್‌ ಅವರು ಪ್ರಬಲರಾಗುತ್ತಾ ಬಂದಂತೆ ಧನಕರ್ ಅವರು ಕಾಂಗ್ರೆಸ್‌ನಿಂದ ದೂರವಾದರು. ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರಿಗೆ ಹತ್ತಿರವಾದರು.

ಧನಕರ್ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ 2019ರ ಜುಲೈನಲ್ಲಿ ನೇಮಿಸಲಾಗಿತ್ತು. ರಾಜ್ಯಪಾಲರಾಗಿ ಇದ್ದಷ್ಟು ದಿನವೂಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜತೆಗೆ ಸಂಘರ್ಷದ
ಲ್ಲಿಯೇ ಇದ್ದರು. ಅವರು ಬಿಜೆಪಿಯ ಏಜೆಂಟ್‌ ಎಂದು ಆಡಳಿತಾರೂಢ ಟಿಎಂಸಿ ಹಲವು ಬಾರಿ ಆರೋಪಿಸಿತ್ತು. ಆದರೆ, ಧನಕರ್‌ ಅವರು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದವರು ಎಂದು ಬಿಜೆಪಿ ಶ್ಲಾಘಿಸಿತ್ತು. ಸಂವಿಧಾನ ಪ್ರಕಾರವೇ ನಡೆದುಕೊಂಡಿದ್ದೇನೆ ಎಂದು ಧನಕರ್ ಅವರು ಹಲವು ಬಾರಿ ತಮ್ಮನ್ನು ಸಮರ್ಥಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.