ADVERTISEMENT

ಉಮೇಶ್​ ಪಾಲ್ ಹತ್ಯೆ ಆರೋಪಿ ಅತೀಕ್ ಅಹ್ಮದ್​ ಪುತ್ರ ಎನ್​ಕೌಂಟರ್​ನಲ್ಲಿ ಸಾವು

ಪಿಟಿಐ
Published 13 ಏಪ್ರಿಲ್ 2023, 14:39 IST
Last Updated 13 ಏಪ್ರಿಲ್ 2023, 14:39 IST
ಎನ್‌ಕೌಂಟರ್‌ ನಡೆದಿರುವ ದಶ್ಯ (ಒಳ ಚಿತ್ರದಲ್ಲಿ ಅಸಾದ್ ಅಹ್ಮದ್‌)
ಎನ್‌ಕೌಂಟರ್‌ ನಡೆದಿರುವ ದಶ್ಯ (ಒಳ ಚಿತ್ರದಲ್ಲಿ ಅಸಾದ್ ಅಹ್ಮದ್‌)   

ಲಖನೌ/ಝಾನ್ಸಿ: ‘ಉಮೇಶ್‌ ಪಾಲ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ, ಪಾತಕಿ–ಮಾಜಿ ಸಂಸದ ಅತೀಕ್‌ ಅಹ್ಮದ್‌ ಪುತ್ರ ಅಸಾದ್‌, ಆತನ ಸಹಚರ ಗುಲಾಮ್‌ನನ್ನು ಉತ್ತರ ಪ್ರದೇಶ ಪೊಲೀಸರೊಂದಿಗೆ ಝಾನ್ಸಿಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಅಸಾದ್‌ ಹಾಗೂ ಗುಲಾಮ್‌ ಅವರ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ ₹ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಉತ್ತರ ಪ್ರದೇಶ ಎಸ್‌ಟಿಎಫ್‌ ತಂಡ ನಡೆಸಿದ ಎನ್‌ಕೌಂಟರ್‌ನಲ್ಲಿ ಈ ಇಬ್ಬರನ್ನು ಹತ್ಯೆ ಮಾಡಲಾಗಿದೆ’ ಎಂದು ವಿಶೇಷ ಡಿಜಿ (ಕಾನೂನು–ಸುವ್ಯವಸ್ಥೆ) ಪ್ರಶಾಂತ್‌ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಡಿಎಸ್ಪಿಗಳಾದ ನವೇಂದು ಕುಮಾರ್‌ ಹಾಗೂ ವಿಮಲ್ ಕುಮಾರ್‌ ಈ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ನೇತೃತ್ವ ವಹಿಸಿದ್ದರು’ ಎಂದರು.

ADVERTISEMENT

‘ಆರೋಪಿಗಳಿಂದ ಅತ್ಯಾಧುನಿಕ, ವಿದೇಶಿ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಬಳಿಕ ಮತ್ತಷ್ಟು ವಿವರಗಳು ಲಭ್ಯವಾಗಲಿವೆ’ ಎಂದು ಅವರು ಹೇಳಿದರು.

ಬೈಕ್‌ನಲ್ಲಿ ಗುರುವಾರ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರನ್ನು ಎಸ್‌ಟಿಎಫ್‌ ತಂಡ ತಡೆಯಿತು. ಆಗ ಅವರು ಪೊಲೀಸರತ್ತ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರನ್ನು ಹೊಡೆದುರುಳಿಸಲಾಯಿತು ಎಂದು ಹೇಳಿದರು.

ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ, ಅತೀಕ್‌ ಅಹ್ಮದ್‌ನನ್ನು ಪ್ರಯಾಗ್‌ರಾಜ್‌ ಕೋರ್ಟ್‌ನಲ್ಲಿ ಹಾಜರುಪಡಿಸಿದ ದಿನವೇ ಈ ಎನ್‌ಕೌಂಟರ್‌ ನಡೆದಿದೆ. ವಿಚಾರಣೆ ನಂತರ, ಅತೀಕ್‌ ಅಹ್ಮದ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಯಿತು.

ಎನ್‌ಕೌಂಟರ್ ನಡೆದಿತ್ತು ಎನ್ನಲಾದ ಸ್ಥಳದಲ್ಲಿ ಬೈಕ್‌ವೊಂದರ ಪಕ್ಕದಲ್ಲಿ ಅಸಾದ್ ಹಾಗೂ ಗುಲಾಮ್ ಮೃತದೇಹಗಳು ಬಿದ್ದಿದ್ದ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ನಂತರ, ಆಂಬುಲೆನ್ಸ್‌ನಲ್ಲಿ ಶವಗಳನ್ನು ಸಾಗಿಸಲಾಯಿತು ಎಂದು ಮೂಲಗಳು ಹೇಳಿವೆ.

ಬಿಎಸ್‌ಪಿಯ ಮಾಜಿ ಶಾಸಕ ರಾಜು ಪಾಲ್‌ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ ಕೊಲೆ‍ ಪ್ರಕರಣದಲ್ಲಿ ಈ ಇಬ್ಬರು ಪೊಲೀಸರಿಗೆ ಬೇಕಾಗಿದ್ದರು.

ಫೆಬ್ರುವರಿ 24ರಂದು ಉಮೇಶ್‌ ಪಾಲ್‌ ಹತ್ಯೆಯಾದ ನಂತರ ಅಸಾದ್‌ ಹಾಗೂ ಗುಲಾಮ್ ತಲೆಮರೆಸಿಕೊಂಡಿದ್ದರು. ಇಬ್ಬರ ಪತ್ತೆಗಾಗಿ ಎಸ್‌ಟಿಎಫ್‌ನ ಹಲವು ತಂಡಗಳನ್ನು ರಚಿಸಲಾಗಿತ್ತು.

ಅಭಿನಂದನೆ ಸಲ್ಲಿಸಿದ ಉಪಮುಖ್ಯಮಂತ್ರಿ: ಉಮೇಶ್‌ ಪಾಲ್‌ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಉತ್ತರ ಪ್ರದೇಶ ಪೊಲೀಸರು ಹಾಗೂ ಎಸ್‌ಟಿಎಫ್‌ ಸಿಬ್ಬಂದಿಗೆ ಉಪಮುಖ್ಯಮಂತ್ರಿ ಕೇಶವಪ್ರಸಾದ್‌ ಮೌರ್ಯ ಅಭಿನಂದನೆ ಸಲ್ಲಿಸಿದ್ದಾರೆ.

‘ನೀವು ಯಾವುದೇ ಅಪರಾಧ ಎಸಗಿರದಿದ್ದಲ್ಲಿ ಯಾರೂ ನಿಮ್ಮನ್ನು ಮುಟ್ಟುವುದಿಲ್ಲ. ಅಪರಾಧ ಎಸಗಿದವರನ್ನು ಬಿಡುವುದಿಲ್ಲ’ ಎಂದು ಅವರು ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ.

ಅತೀಕ್‌ ಅಹ್ಮದ್‌ ಕೂಡ 2005ರಲ್ಲಿ ನಡೆದ ರಾಜು ಪಾಲ್‌ ಹತ್ಯೆ ಪ್ರಕರಣದ ಆರೋಪಿ.

ಎನ್‌ಕೌಂಟರ್‌: ಸಮಗ್ರ ತನಿಖೆಗೆ ಎಸ್‌ಪಿ, ಬಿಎಸ್‌ಪಿ ಆಗ್ರಹ
ಲಖನೌ (ಪಿಟಿಐ):
ಪಾತಕಿ– ಮಾಜಿ ಸಂಸದ ಅತೀಕ್‌ ಅಹ್ಮದ್‌ ಪುತ್ರ ಅಸಾದ್ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಗುರುವಾರ ಆಗ್ರಹಿಸಿವೆ.

ಉತ್ತರ ಪ್ರದೇಶ ಪೊಲೀಸರು ನಡೆಸಿದ ಈ ಕಾರ್ಯಾಚರಣೆ ನಕಲಿ ಎನ್‌ಕೌಂಟರ್‌ ಎಂದೂ ಈ ಪಕ್ಷಗಳು ಟೀಕಿಸಿವೆ.

‘ರಾಜ್ಯದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಬಿಜೆಪಿ ನೇತೃತ್ವದ ಸರ್ಕಾರ ನಕಲಿ ಎನ್‌ಕೌಂಟರ್‌ಗಳನ್ನು ನಡೆಸುತ್ತಿದೆ’ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್ ಆರೋಪಿಸಿದ್ದಾರೆ.

‘ಬಿಜೆಪಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅದು ಭ್ರಾತೃತ್ವದ ವಿರೋಧಿಯೂ ಆಗಿದೆ. ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಣಯಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ’ ಎಂದು ಯಾದವ್‌ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಎನ್‌ಕೌಂಟರ್‌ ಕುರಿತು ಪ್ರತಿಕ್ರಿಯಿಸಿರುವ ಬಿಎಸ್‌ಪಿ ನಾಯಕಿ ಮಾಯಾವತಿ, ‘ವಿಕಾಸ್‌ ದುಬೆಯನ್ನು ಹೊಡೆದುರುಳಿಸಿದ ರೀತಿಯಂತೆಯೇ ಈ ಘಟನೆಯೂ ನಡೆದಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಸತ್ಯಸಂಗತಿ ಹೊರಬರಬೇಕಾದರೆ ಉನ್ನತ ಮಟ್ಟದ ತನಿಖೆ ಅಗತ್ಯ’ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.