ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಬಂಧನದಲ್ಲಿರುವ ಜಾರ್ಖಂಡ್ ಸಚಿವ ಅಲಂಗೀರ್ ಆಲಂ ಅವರು ರಾಜ್ಯ ಸಂಪುಟ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಆಲಂ ಅವರು ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಿಂದ ಮುಖ್ಯಮಂತ್ರಿ ಚಂಪೈ ಸೊರೇನ್ ಅವರಿಗೆ ಪತ್ರ ಬರೆದು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಆಲಂ, 'ಜಾರ್ಖಂಡ್‌ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸುತ್ತೇನೆ. ಸಿಎಲ್‌ಪಿ ನಾಯಕನಾಗಿ, ಸಚಿವನಾಗಿ ಕೆಲಸ ಮಾಡಲು ಅವಕಾಶ ನೀಡಿದ ಪಕ್ಷಕ್ಕೆ ನಾನು ಕೃತಜ್ಞರಾಗಿರುತ್ತೇನೆ' ಎಂದು ತಿಳಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಮೇ 15ರಂದು ಆಲಂ ಅವರನ್ನು ಬಂಧಿಸಿತ್ತು. ಆಲಂ ಅವರ ಆಪ್ತ ಸಹಾಯಕ ಸಂಜೀವ್ ಲಾಲ್ ಮತ್ತು ಅವರ ಮನೆಗೆಲಸ ಮಾಡುತ್ತಿದ್ದ ಜಹಾಂಗೀರ್ ಆಲಂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸುಮಾರು ₹32 ಕೋಟಿ ನಗದು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಇಬ್ಬರನ್ನೂ ಇ.ಡಿ ಬಂಧಿಸಿತ್ತು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಮತ್ತು ಲಂಚ ಪಡೆಯಲಾಗುತ್ತಿತ್ತು ಎಂಬ ಆರೋಪಕ್ಕೆ ಸಂಬಂಧಿಸಿಂತೆ ಇ.ಡಿ ತನಿಖೆ ನಡೆಸುತ್ತಿದೆ.
ಚಂಪೈ ಸೊರೇನ್ ಅವರ ಸಂಪುಟದಿಂದ ಆಲಂ ಅವರನ್ನು ವಜಾಗೊಳಿಸುವಂತೆ ಕಳೆದ ವಾರ ಬಿಜೆಪಿ ಪ್ರತಿಭಟನೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.