ADVERTISEMENT

Jaipur Literature Festival: ಸಂಸ್ಕೃತಿ ಉಳಿವಿನ ಸಂಕಷ್ಟ

ಕನ್ನಡದ ಲೇಖಕ ಶಾಂತ ನಾಯಕ್‌ ಪ್ರಶ್ನೆ

ಕೋಡಿಬೆಟ್ಟು ರಾಜಲಕ್ಷ್ಮಿ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
<div class="paragraphs"><p>ಜೈಪುರ ಲಿಟರೇಚರ್‌ ಫೆಸ್ಟಿವೆಲ್‌ನಲ್ಲಿ ಶನಿವಾರ ‘ಆದಿವಾಣಿ‘ ಗೋಷ್ಠಿಯಲ್ಲಿ ಬಂಜಾರ ಭಾಷಾ ಸಂಶೋಧಕ, ಕನ್ನಡ ಲೇಖಕ ಶಾಂತ ನಾಯಕ್‌ ಮಾತನಾಡಿದರು. ಲೇಖಕರಾದ ಬದ್ರಿ ನಾರಾಯಣ್‌ ಮತ್ತು ವಸಮಲ್ಲಿ ಕೆ. ಉಪಸ್ಥಿತರಿದ್ದರು.</p></div>

ಜೈಪುರ ಲಿಟರೇಚರ್‌ ಫೆಸ್ಟಿವೆಲ್‌ನಲ್ಲಿ ಶನಿವಾರ ‘ಆದಿವಾಣಿ‘ ಗೋಷ್ಠಿಯಲ್ಲಿ ಬಂಜಾರ ಭಾಷಾ ಸಂಶೋಧಕ, ಕನ್ನಡ ಲೇಖಕ ಶಾಂತ ನಾಯಕ್‌ ಮಾತನಾಡಿದರು. ಲೇಖಕರಾದ ಬದ್ರಿ ನಾರಾಯಣ್‌ ಮತ್ತು ವಸಮಲ್ಲಿ ಕೆ. ಉಪಸ್ಥಿತರಿದ್ದರು.

   

ಜೈಪುರ: ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಹೇಳುವಾಗ ಬಂಜಾರ ಮಹಿಳೆಯರ ಕಲಾತ್ಮಕ ದಿರಿಸುಗಳನ್ನು ಉಲ್ಲೇಖಿಸಲಾಗುತ್ತದೆ. ಆದರೆ ಬಂಜಾರ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ಉತ್ಸಾಹ ಇರುವುದಿಲ್ಲ. ನಮ್ಮ ಸಮುದಾಯದ ಕಲೆ ಬೇಕು, ಜನರು ಬೇಡ ಎನ್ನುವುದು ಎಷ್ಟು ಸರಿ ಎಂದು ಕನ್ನಡದ ಲೇಖಕ, ಬಂಜಾರ ಭಾಷಾ ಸಂಶೋಧಕ ಶಾಂತ ನಾಯಕ್‌ ಪ್ರಶ್ನಿಸಿದರು.

‘ಜೈಪುರ ಲಿಟಚರೇಚರ್‌ ಫೆಸ್ಟಿವಲ್‌’ನಲ್ಲಿ ಶನಿವಾರ, ‘ಆದಿವಾಣಿ’ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಜಾರ ಸಮುದಾಯದ ಜನರು ದೇಶದಾದ್ಯಂತ ವಾಸಿಸುತ್ತಿದ್ದರೂ, ಅವರ ಏಳಿಗೆಗಾಗಿ ಪ್ರಯತ್ನಗಳಾಗಿಲ್ಲ. ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿದ್ದ ಈ ಸಮುದಾಯದವರು, ಇಂದೂ ಅರೆ ಅಲೆಮಾರಿಗಳಾಗಿದ್ದಾರೆ. ತಂತ್ರಜ್ಞಾನವು ಬಂದಮೇಲೆ ನಮ್ಮ ಸಂಸ್ಕೃತಿಯನ್ನುಉಳಿಸಿಕೊಳ್ಳುವುದು ಕಷ್ಟವಾಗಿದೆ. ಬಂಜಾರ ದಿರಿಸುಗಳನ್ನು ಹೊಲಿಯುವುದು ದುಬಾರಿ ಕೆಲಸವಾಗಿದೆ. ಅದಕ್ಕೆ ಬೇಕಾದ ಕನ್ನಡಿಗಳು, ಇಪ್ಪತ್ತು ಪೈಸೆ ನಾಣ್ಯಗಳು ಈಗ ಲಭ್ಯವಾಗುತ್ತಿಲ್ಲ’ ಎಂದರು.

ADVERTISEMENT

ಟೋಡಾ ಸಮುದಾಯದ ಲೇಖಕಿ ವಸಮಲ್ಲಿ ಕೆ. ಮಾತನಾಡಿ, ‘ಎಮ್ಮೆಗಳನ್ನುಸಾಕುವ ಟೋಡಾ ಸಮುದಾಯದ ಜನರು ಪೂರ್ವದಲ್ಲಿಯೇ ಚಂದ್ರನ ಮೇಲೆ ಮನೆ ಮಾಡುವ ಕನಸು ಕಂಡಿದ್ದರು. ಈ ಸಮುದಾಯಕ್ಕೆ ಬೆಟ್ಟವೇ ದೇವರು. ಈಗ ತಂತ್ರಜ್ಞಾನದ ಅಬ್ಬರದಲ್ಲಿ, ನಾನು, ಮಾತೃಭಾಷೆಯನ್ನು ಪ್ರೀತಿಸಿ. ಅದೇ ಭಾಷೆಯಲ್ಲಿ ಮಾತನಾಡಿ ಮಕ್ಕಳೇ... ಎಂದಷ್ಟೇ ಹೇಳಬಲ್ಲೆ’ ಎನ್ನುತ್ತಾ ತಮ್ಮ ಭಾಷೆಯ ಹಾಡು ಮತ್ತು ಕಥೆಗಳನ್ನು ಹೇಳಿದರು. ಭೋಜ್‌ಪುರಿ ಲೇಖಕ ಬದ್ರಿನಾರಾಯಣ ಕೂಡ ತಮ್ಮ ಸಮುದಾಯದ ಕಥೆಗಳನ್ನು ಹೇಳಿಕೊಂಡರು.

ಮಾತೃಭಾಷೆಯಲ್ಲೇ ಮಹತ್ವದ ಕೃತಿಸೃಷ್ಟಿ

ಜಗತ್ತಿನ ಮಹತ್ವದ ಸಾಹಿತ್ಯ ಕೃತಿಗಳೆಲ್ಲವೂ ಮಾತೃಭಾಷೆಯಲ್ಲಿಯೇ ಸೃಷ್ಟಿಯಾಗಿವೆ. ಕಾಲ್ಪನಿಕತೆಯು ಬರಹ ರೂಪವನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿಯೇ ಹೊಸದೇನೋ ಸೃಷ್ಟಿಯಾಗುತ್ತದೆ. ಕಥೆ ಹೇಳುವ ಪ್ರಕ್ರಿಯೆಯಲ್ಲಿ ಈ ಹೊಸತನ ಬಹಳ ಮುಖ್ಯ ಹಾಗೂ ಮಾತೃಭಾಷೆಯಲ್ಲಿ ಬರೆದಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಕನ್ನಡದ ಲೇಖಕ ವಿವೇಕ ಶಾನಭಾಗ ಹೇಳಿದರು.

'ಸಕೀನಾಳ ಮುತ್ತು' ಕಾದಂಬರಿಯ ಇಂಗ್ಲಿಷ್‌ ಅನುವಾದದ ಪುಟ್ಟ ಭಾಗವನ್ನು ಓದಿದ ಅವರು, ‘ಕಳೆದ 30 ವರ್ಷಗಳಲ್ಲಿ ಜಾಗತೀಕರಣದ ಪ್ರಭಾವವನ್ನು ಗಮನಿಸುವಾಗ ಕಥೆ ಹೇಳುವ ಪ್ರಕ್ರಿಯೆ ತುಂಬ ಮುಖ್ಯ ಎಂದು ನನಗೆ ಅನಿಸುತ್ತದೆ. ಏನೂ ಅರ್ಥವಾಗದೇ ಇದ್ದರೂ ಅರ್ಥವಾದಂತೆ ನಟಿಸುವ ಸಂದರ್ಭದಲ್ಲಿ ಕಥೆ ಹೇಳಲೇಬೇಕಾಗಿದೆ. ಎಷ್ಟೋ ಮಂದಿ ಯುವಬರಹಗಾರರು ತಾವು ಬರೆದುದು ನಿಜ ಕಥೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಈ ನಿಜದ ಬೆನ್ನು ಹತ್ತುವುದನ್ನು ಬಿಟ್ಟು, ಜೀವನಾನುಭವದ ತೀವ್ರತೆಯು ಸೃಜನಶೀಲವಾಗಿ ಅರಳುವ ಬಗೆಯನ್ನು ಕಂಡುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.