ಜೈಪುರ: ‘ಮೇಲ್ಜಾತಿಯ ಮೊಘಲರು ಹಾಗೂ ಮೇಲ್ಜಾತಿಯ ಹಿಂದೂಗಳ ನಡುವಿನ ಸೌಹಾರ್ದ ಸಂಬಂಧದ ಕಥೆಗಳನ್ನು ಇತಿಹಾಸ ಹೇಳುತ್ತದೆ. ಇಲ್ಲಿ ದಲಿತರ ಇತಿಹಾಸ ಎಲ್ಲಿ ಇದೆ ಎಂದು ಹುಡುಕಬೇಕಿದೆ’ ಎಂದು ‘ಅಫೇರ್ಸ್ ಆಫ್ ಕೃತಿಯ’ ಲೇಖಕರೂ ಆಗಿರುವ ದಲಿತ ರ‍್ಯಾಪರ್ ಸುಮಿತ್ ಸಾಮೊಸ್ ವಿಷಾದಿಸಿದರು.
ಜೈಪುರ ಸಾಹಿತ್ಯೋತ್ಸವದಲ್ಲಿ ಶನಿವಾರ ನಡೆದ ‘ಆಫೇರ್ಸ್ ಆಫ್ ಕಾಸ್ಟ್’ (ಜಾತಿಯ ಸಂಬಂಧಗಳು) ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಟಿಪ್ಪು ಸುಲ್ತಾನ್ ಕೂಡ ಮಠಗಳನ್ನು ರಕ್ಷಿಸಿದ್ದ. ಹೈದರಾಬಾದ್ ನಿಜಾಮರು ಕಯಾಸ್ತು ಬ್ರಾಹ್ಮಣರನ್ನು ಹತ್ತಿರ ಇಟ್ಟುಕೊಂಡಿದ್ದರು. ಇಂತಹ ‘ಯುಗಳ ಇತಿಹಾಸ’ವನ್ನಷ್ಟೆ ನಾವು ಓದಿದ್ದೇವೆ. ನಮ್ಮಂಥ ದಲಿತರ ಇತಿಹಾಸವನ್ನೂ ಹೇಳಬೇಕಿದೆ. ಅದಕ್ಕೇ ನನ್ನ ಕೃತಿಯಲ್ಲಿ ಸೂಕ್ಷ್ಮ ಇತಿಹಾಸವನ್ನೂ ದಾಖಲಿಸಿರುವೆ. ಅದು ಅನುಭವ ಕೇಂದ್ರಿತವಾದ ವೀಕ್ಷಕ ವಿವರಣೆ, ಆತ್ಮಕತೆ ಎಲ್ಲವೂ ಆಗಿದೆ’ ಎಂದು ಹೇಳಿದರು.
ಒಡಿಶಾದ ಗುಡ್ಡಗಾಡು ಪ್ರದೇಶದಲ್ಲಿ ಶುಶ್ರೂಷಕಿಯಾಗಿದ್ದ ತಮ್ಮ ತಾಯಿ ಮೇಲ್ಜಾತಿಯವರ ಮನೆಗಳಿಗೆ ಹೋದಾಗ, ಅಲ್ಲಿ ರೋಗಿಗಳನ್ನು ಕಷ್ಟಪಟ್ಟು ಮನೆಯಿಂದ ಹೊರಕ್ಕೆ ತರುತ್ತಿದ್ದ ಪ್ರಸಂಗವನ್ನು ಅವರು ನೆನಪಿಸಿಕೊಂಡರು.
‘ಮೇಲ್ಜಾತಿಯ ರೋಗಿ ಎಷ್ಟೇ ನಿಸ್ತೇಜವಾಗಿದ್ದರೂ ಬಲವಂತವಾಗಿ ಹೊರಗೆ ತರುತ್ತಿದ್ದರೇ ವಿನಾ ತಾಯಿಯನ್ನು ಒಳಗೆ ಬಿಡುತ್ತಿರಲಿಲ್ಲ. ಮೇಲ್ಜಾತಿಯ ಮಹಿಳೆಯರು, ಕೇರಿಯವರು ತೊಳೆದು ಕೊಡುತ್ತಿದ್ದ ಪಾತ್ರೆಗಳ ಮೇಲೆ ಮತ್ತೆ ನೀರು ಸುರಿದು ಒಳಗೆ ಇಡುತ್ತಿದ್ದುದೂ ಕಣ್ಣಿಗೆ ಕಟ್ಟಿದ ಹಾಗಿದೆ. ಇವೆಲ್ಲ ಪ್ರಸಂಗಗಳೇ ಪುಸ್ತಕ ಬರೆಯಲು ಪ್ರೇರಣೆ’ ಎಂದು; ಜೆಎನ್‌ಯುನಲ್ಲಿ ಕಲಿತು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿರುವ ಸುಮಿತ್ ಭಾವುಕರಾದರು.
‘ಮೇಲ್ಜಾತಿಯವರನ್ನು ಗೇಲಿ ಮಾಡುತ್ತಲೇ ಕೇರಿಯಲ್ಲಿ ಬೆಳೆದ ತಮ್ಮಲ್ಲಿ ತಮ್ಮದೇ ಸಮುದಾಯದ ಪುಸ್ತಕಗಳನ್ನು ಪ್ರಕಟಿಸುವ ಉಮೇದು ಹುಟ್ಟಿದ ಬಗೆಯನ್ನು ಕವಿ, ಪ್ರಕಾಶಕ ಯೋಗೇಶ್ ಮೈತ್ರೇಯಾ ಬಣ್ಣಿಸಿದರು. ಸುಮಿತ್ ಕೃತಿಯನ್ನು ತಮ್ಮ ‘ಪ್ಯಾಂಥರ್ಸ್ ಪಾ’ ಪ್ರಕಾಶನ ಸಂಸ್ಥೆಯಿಂದ ನಾಗ್ಪುರದ ಯೋಗೇಶ್ ಪ್ರಕಟ ಮಾಡಿದ್ದಾರೆ. ಭಾರತದ ವಿವಿಧ ಭಾಗಗಳ ದಲಿತ ಸಂವೇದನೆಯ ಕೃತಿಗಳನ್ನು ಪ್ರಕಟಿಸುವ ಉಮೇದು ಅವರದ್ದು.
‘ಕಾಸ್ಟ್ ಮ್ಯಾಟರ್ಸ್’ ಕೃತಿಯ ಲೇಖಕ ಸೂರಜ್ ಯೆಂಗ್ಡೆ ಲವಲವಿಕೆಯಿಂದ ಕಾರ್ಯಕ್ರಮ ನಿರ್ವಹಿಸಿದರು. ಜೈಪುರ ಸಾಹಿತ್ಯೋತ್ಸವದಲ್ಲಿ ಸಂಪೂರ್ಣ ದಲಿತ ಮಾತುಗಾರರನ್ನು ಒಳಗೊಂಡ ಮೊದಲ ಗೋಷ್ಠಿ ಇದು ಎಂದು ಅವರು ಹೆಮ್ಮೆಯಿಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.