ನವದೆಹಲಿ: ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜ.28ರಿಂದ ಫೆಬ್ರುವರಿ 1ರವರೆಗೆ ನಡೆಯಬೇಕಿದ್ದ ಜೈಪುರ ಸಾಹಿತ್ಯ ಉತ್ಸವವನ್ನು (ಜೆಎಲ್ಎಫ್) ಮುಂದೂಡಲಾಗಿದೆ ಎಂದು ಸಂಘಟಕರು ಶುಕ್ರವಾರ ತಿಳಿಸಿದ್ದಾರೆ.
ಈ ಉತ್ಸವವನ್ನು ಮಾರ್ಚ್ 5–14ರವರೆಗೆ ಆಯೋಜಿಸಲಾಗಿದೆ. ಮಾ.5 ರಿಂದ 9ರವರೆಗೆ ವರ್ಚುವಲ್ ವಿಧಾನದ ಮೂಲಕ ಹಾಗೂ ಮಾ.10ರಿಂದ 14ರ ವರೆಗೆ ಭೌತಿಕವಾಗಿ ನಡೆಯಲಿದೆ ಎಂದು ಈ ಉತ್ಸವದ ನಿರ್ಮಾಪಕ ಸಂಜಯ್ ಕೆ.ರಾಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖಕರು, ಚಿಂತಕರು, ರಾಜಕಾರಣಿಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಗಳು ಸೇರಿದಂತೆ ವಿಶ್ವದೆಲ್ಲೆಡೆಯಿಂದ 250 ಮಂದಿ ಈ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಬಾರಿ ಜೈಪುರದ ಡಿಗ್ಗಿ ಪ್ಯಾಲೇಸ್‌ನಲ್ಲಿ ಜೆಎಲ್‌ಎಫ್ ನಡೆಯುತ್ತದೆ. ಈ ಬಾರಿಯ ಕಾರ್ಯಕ್ರಮವನ್ನು ಹೋಟೆಲ್ ಕ್ಲಾರ್ಕ್ಸ್ ಅಂಬರ್‌ನಲ್ಲಿ ಆಯೋಜನೆ ಮಾಡಲಾಗಿದೆ. ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಹಾಗೂ ಹೆಚ್ಚು ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡುವ ಸಲುವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.