ಜೈಪುರ: ಮುಂದುವರಿಯುತ್ತಿರುವ ತಂತ್ರಜ್ಞಾನದ ಕಣ್ಗಾವಲಿನಲ್ಲಿ ವಾಕ್ ಸ್ವಾತಂತ್ರ್ಯವು ಮುಕ್ತವಾಗಿ ಉಳಿಯುವುದಿಲ್ಲ ಎಂಬ ತೀವ್ರ ಆತಂಕದೊಂದಿಗೆ ಜಗತ್ತಿನ ಅತಿ ದೊಡ್ಡ ಸಾಹಿತ್ಯ ಸಮಾರಾಧನೆ ‘ಜೈಪುರ ಸಾಹಿತ್ಯೋತ್ಸವ’ವು ಸೋಮವಾರ ಸಮಾರೋಪಗೊಂಡಿತು.
‘ಬೇಹುಗಾರಿಕೆ ತಂತ್ರಜ್ಞಾನ ಮತ್ತು ಖಾಸಗೀತನದ ಮೇಲಿನ ಆಕ್ರಮಣದ ಹೊರತಾಗಿಯೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ಸಾಧ್ಯವೇ’ ಎಂಬ ವಿಷಯವಾಗಿ ಸಮಾರೋಪ ವೇದಿಕೆಯಲ್ಲಿ ಮಾತಿನ ಜಟಾಪಟಿ ನಡೆಯಿತು.
‘ತಂತ್ರಜ್ಞಾನವು ಎಷ್ಟೇ ಮುಂದುವರಿಯಲಿ, ಮನುಷ್ಯನ ವಾಕ್ ಸ್ವಾತಂತ್ರ್ಯವನ್ನು ಕಸಿಯುವುದು ಸಾಧ್ಯವಾಗುವುದಿಲ್ಲ. ಅಭಿವ್ಯಕ್ತಿಯನ್ನು ಹತ್ತಿಕ್ಕುವ ಕಂಸನು ಸೃಷ್ಟಿಯಾದರೆ, ಅದನ್ನು ರಕ್ಷಿಸುವ ಕೃಷ್ಣನು ಹುಟ್ಟಿಬರುತ್ತಾನೆ’ ಎಂಬ ಸದಾಶಯದೊಂದಿಗೆ ಉದ್ಯಮಿ ಮೋಹಿತ್ ಸತ್ಯಾನಂದ ಚರ್ಚೆಗೆ ಚಾಲನೆ ನೀಡಿದರು. ಹಿರಿಯ ವಕೀಲೆ ಪಿಂಕಿ ಆನಂದ್, ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವವರನ್ನು ನಿಗ್ರಹಿಸಲು ತಂತ್ರಜ್ಞಾನ ಬಳಕೆಯಾಗುತ್ತಿದೆ’ ಎನ್ನುತ್ತ, ನಿರ್ಭಯಾ ಪ್ರಕರಣ, ಸಂಸತ್ತಿನ ಮೇಲೆ ನಡೆದ ಆಕ್ರಮಣದ ಉದಾಹರಣೆ ನೀಡಿದರು. ‘ಆದರೆ, ತಂತ್ರಜ್ಞಾನ ಬಳಸಿ ಕಳ್ಳರನ್ನು ಹಿಡಿಯಬೇಕೇ ಹೊರತು ಜನಸಾಮಾನ್ಯರ ಮೇಲೆ ನಿಷೇಧಗಳನ್ನು ಹೇರುವುದು ಎಷ್ಟು ಸರಿ’ ಎಂದು ಲೇಖಕ ಪವನ್.ಕೆ. ವರ್ಮಾ ಪ್ರಶ್ನಿಸಿದರು.
ಪತ್ರಕರ್ತ ವರ್ಗೀಸ್ ಕೆ. ಜಾರ್ಜ್, ‘ಜನರ ಆಲೋಚನೆಗಳನ್ನೇ ನಿಯಂತ್ರಿಸುವ ರೀತಿಯಲ್ಲಿ ಪ್ರಚಾರಕ್ಕಾಗಿ ತಂತ್ರಜ್ಞಾನ ಬಳಸಿಕೊಳ್ಳುತ್ತಿರುವಾಗ ಮುಕ್ತತೆ ಎಲ್ಲಿಂದ ಬರಬೇಕು’ ಎಂದು ಪ್ರಶ್ನಿಸಿದರು. ಇದೇ ಮಾತನ್ನು ಸಮರ್ಥಿಸಿದ ಬ್ರಿಟಿಷ್ ಗಣಿತಜ್ಞ ಮಾರ್ಕಸ್ ಡು ಸಾಟೊಯ್, ‘ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎನ್ನುತ್ತಲೇ, ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಲು ತಂತ್ರಜ್ಞಾನ ಬಳಸಲಾಗುತ್ತಿದೆ ಎಂಬುದನ್ನು ಗಮನಿಸಬೇಕು’ ಎಂದು ಎಚ್ಚರಿಸಿದರು.
ಜನಪರವಾದ ಮೌಲ್ಯಗಳಿಗಾಗಿ ನಿರಂತರವಾಗಿ ಮಾತನಾಡುವ ಸ್ವಾತಂತ್ರ್ಯ ಇಂದಿಗೂ ಇದ್ದೇ ಇರುತ್ತದೆ ಎಂದು ತತ್ವಶಾಸ್ತ್ರಜ್ಞೆ ಅಮಿಯಾ ಶ್ರೀನಿವಾಸನ್ ಹೇಳಿದರು. ಆದರೆ, ಜನಸಾಮಾನ್ಯರು ಪ್ರಭುತ್ವದ ವಿರುದ್ಧ ಮಾತನಾಡುವಷ್ಟು ಮುಕ್ತ ವಾತಾವರಣವಿಲ್ಲ. ಮುಂದೊಂದು ದಿನ ಅಂತಹ ಮುಕ್ತತೆ ಬರಬಹುದು ಎಂದು ಕನಸು ಕಾಣುತ್ತ ಇಂದು ಮುಕ್ತ ವಾತಾವರಣ ಇದೆ ಎಂದು ಭ್ರಮಿಸುವುದು ಮೂರ್ಖತನವಾಗುತ್ತದೆ ಎಂದು ಪವನ್ ಕೆ. ವರ್ಮಾ ಹೇಳಿದರು.
ಅಂತಿಮವಾಗಿ ವಿಷಯದ ಪರ ಮತ್ತು ವಿರೋಧದ ಮತಗಳನ್ನು ಸಭಿಕರಿಂದ ಪಡೆದಾಗ, ಸಭೆಯಿಂದ ವಿರೋಧದ ಧ್ವನಿಯೇ ಜೋರಾಗಿ ಕೇಳಿ ಬಂತು.
ಚರ್ಚೆ ನಡೆಸಿಕೊಟ್ಟ ಪತ್ರಕರ್ತ ಸಭೆಯ ನಿರ್ಣಯವನ್ನು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.