ADVERTISEMENT

ನಾಳೆಯ ಪಾಲಿಗೂ ಉಳಿಯಲಿ ಈ ಇಳೆ

ಜೈಪುರ ಸಾಹಿತ್ಯೋತ್ಸವದಲ್ಲಿ ಹವಾಮಾನ ಬದಲಾವಣೆ ಕುರಿತು ಚರ್ಚೆ

ಪದ್ಮನಾಭ ಭಟ್ಟ‌
Published 26 ಜನವರಿ 2019, 19:16 IST
Last Updated 26 ಜನವರಿ 2019, 19:16 IST

ಜೈಪುರ: ‘ಹವಾಮಾನ ಬದಲಾವಣೆಯ ಹೆಚ್ಚು ದುಷ್ಟರಿಣಾಮಗಳನ್ನು ಎದುರಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ನೀರಿನ ಸಮರ್ಥ ಬಳಕೆ ಭಾರತದಂಥ ದೇಶದಲ್ಲಿ ಅತ್ಯಂತ ಸವಾಲಿನ ಕೆಲಸವಾಗಿದೆ. ಆದರೆ ಈ ವಿಷಯಗಳ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ. ಜಾಗೃತಿ ಮೂಡಿಸುವ ಕೆಲಸವೂ ಸಮರ್ಥವಾಗಿ ನಡೆಯುತ್ತಿಲ್ಲ' ಎಂದು ಪರಿಸರ ರಕ್ಷಣಾ ಕಾರ್ಯಕರ್ತೆ ಮೃದುಲಾ ರಮೇಶ್ ಕಳವಳ ವ್ಯಕ್ತಪಡಿಸಿದರು.

ಜೈಪುರ ಸಾಹಿತ್ಯೋತ್ಸವದಲ್ಲಿ ಶನಿವಾರ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರೇ ಮುಂದಾಗಿ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕಾದ ಅಗತ್ಯವನ್ನು ಪ್ರತಿ‍ಪಾದಿಸಿದರು.

‘ಪರಿಸರ ರಕ್ಷಣೆಯ ಕೆಲಸ ಸರ್ಕಾರದಿಂದ ನಡೆಯುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ನಮಗೆ ಹೆಚ್ಚು ಸಮಯವೂ ಇಲ್ಲ. ಈಗಾಗಲೇ ನಾವು ಅಪಾಯದ ಅಂಚಿನಲ್ಲಿದ್ದೇವೆ. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಕಾನೂನು ರೂಪಿಸಬೇಕು ಎಂದರೆ ರಾಜಕಾರಣಿಗಳ ಮೊರೆ ಹೋಗಬೇಕು. ಆದರೆ ರಾಜಕಾರಣಿಗಳು ಚುನಾವಣೆಯ ಸಮಯಕ್ಕಾಗಿ ಕಾಯುತ್ತಾರೆ. ಒಂದು ಸರ್ಕಾರ ಒಪ್ಪಿದ ಯೋಜನೆಗೆ ಇನ್ನೊಂದು ಸರ್ಕಾರ ಅಡ್ಡಗಾಲು ಹಾಕುತ್ತದೆ. ಹವಾಮಾನ ಬದಲಾವಣೆ ಬಗ್ಗೆ ಅರಿವಿರುವ, ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಕಾಳಜಿ ಹೊಂದಿರುವ ಸೂಕ್ಷ್ಮ ಸಂವೇದನೆಯ ರಾಜಕಾರಣಿಗಳು ನಮ್ಮಲ್ಲಿ ಇಲ್ಲದಿರುವುದು ದುರಂತ’ ಎಂದರು.

ADVERTISEMENT

‘ಪರಿಸರ ರಕ್ಷಣೆಯ ಹೊಣೆಯನ್ನು ಜನರು ವೈಯಕ್ತಿಕವಾಗಿ ಹೊರುವುದು ಕಷ್ಟ. ಆದರದು ಖಂಡಿತ ಅಸಾಧ್ಯವಲ್ಲ. ನಮ್ಮ ಮನಸ್ಥಿತಿ ಬದಲಾಗಬೇಕು. ಆಗ ಹೊಸ ದಾರಿಗಳು ತಂತಾನೆ ತೆರೆದುಕೊಳ್ಳುತ್ತವೆ' ಎಂದೂ ಹೇಳಿದರು.

‘ನಮ್ಮಲ್ಲಿ ಬಹುತೇಕರಿಗೆ ನಾವು ಮಾಡಬೇಕಾದ ಕೆಲಸ ಏನು ಎನ್ನುವುದು ತಿಳಿದಿದೆ. ಅದು ಅಸಾಧ್ಯವಲ್ಲ ಎಂಬುದೂ ತಿಳಿದಿದೆ. ಆದರೆ ನಾವು ಆ ಕೆಲಸಗಳ ಕಾರ್ಯರೂಪಕ್ಕೆ ಮುಂದಾಗುತ್ತಿಲ್ಲ. ನಮ್ಮ ದಿನನಿತ್ಯದ ದಿನಚರಿಯಲ್ಲಿಯೇ ಕೊಂಚ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಪರಿಸರ ರಕ್ಷಣೆಗೆ ಕೊಡುಗೆ ನೀಡಬಹುದು’ ಎಂದ ಅವರು, ಜಾಗೃತಿಯ ಜತೆಗೆ ತಿಳಿವಳಿಕೆಯನ್ನು ಕಾರ್ಯರೂಪದಲ್ಲಿಯೂ ತರಬೇಕಾದ ಅಗತ್ಯವನ್ನು ಒತ್ತಿಹೇಳಿದರು.

ನಾರ್ವೆ ದೇಶದ ಪರಿಸರತಜ್ಞೆ, ಕಾದಂಬರಿಗಾರ್ತಿ ಮಾಜ ಲುಂಡೆ ಚರ್ಚೆಯಲ್ಲಿ ಪಾಲ್ಗೊಂಡು ಮಕ್ಕಳಿಗೆ ಪರಿಸರ ರಕ್ಷಣೆಯ ಅರಿವು ಮೂಡಿಸಬೇಕಾದ ಅವಶ್ಯಕತೆಯ ಕುರಿತು ಮಾತನಾಡಿದರು.

'ಮನುಷ್ಯ ಕೂಡ ಈ ಭೂಮಿಯ ಮೇಲಿನ ಪ್ರಾಣಿಯೇ. ಉಳಿದೆಲ್ಲ ಪ್ರಾಣಿಗಳನ್ನು ಹಿಂದಿಕ್ಕಿ ತನ್ನ ಪ್ರಭುತ್ವ ಸಾಧಿಸಿಕೊಂಡಿದ್ದಾನೆ. ಈ ಹೆಮ್ಮೆಯ ಜತೆಗೇ ನಮ್ಮ ಮೇಲೆ ಇನ್ನೊಂದು ಹೊಣೆಗಾರಿಕೆಯೂ ಇದೆ. ಅದು ಈ ಭೂಮಿಯನ್ನು ರಕ್ಷಿಸುವ ಹೊಣೆಗಾರಿಕೆ. ಆದರೆ ನಾವು ಸ್ವಾರ್ಥಿಗಳಾಗಿ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳುವುದು ಎಂದು ನೋಡಿಕೊಳ್ಳುತ್ತಿದ್ದೇವೆ. ನಮ್ಮ ಹಾಗೆಯೇ ಈ ಭೂಮಿಯ ಭಾಗವಾಗಿರುವ ಉಳಿದ ಜೀವಸಂಕುಲವನ್ನು ಮರೆಯುತ್ತಿದ್ದೇವೆ' ಎಂದರು.

'ಈ ಭೂಮಿ ನಮ್ಮ ಮುಂದಿನ ಪೀಳಿಗೆಯವರ ಅಗತ್ಯವೂ ಹೌದು. ಮಕ್ಕಳಿಗೆ ಪರಿಸರ ಪ್ರೀತಿಯನ್ನು ಕಲಿಸಿಕೊಡಬೇಕು. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಡಬೇಕು. ಹವಾಮಾನ ಬದಲಾವಣೆ ಇದೇ ರೀತಿ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ಭೂಮಿಯ ಮೇಲೆ ಜೀವಸಂಕುಲ ಬದುಕಲಿಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗುತ್ತದೆ' ಎಂಬ ಎಚ್ಚರಿಕೆಯ ಮಾತನ್ನೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.