ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಪ್ರಸಿದ್ಧ ಶಾಲೆಯೊಂದು ವಿದ್ಯಾರ್ಥಿಗಳು ಮಾಂಸಾಹಾರದ ಪದಾರ್ಥಗಳನ್ನು ಶಾಲೆಗೆ ತರುವುದನ್ನು ನಿಷೇಧಿಸಲು ಮುಂದಾಗಿದೆ ಎಂಬ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಷಯವನ್ನು ಅಲ್ಲಗಳೆದಿರುವ ಶಾಲೆಯ ಪ್ರಾಂಶುಪಾಲರು, ಈ ರೀತಿಯ ಯಾವುದೇ ನೋಟಿಸ್ ಅನ್ನು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೇ 1ರಂದು ಪೋಷಕರಿಗೆ ನೋಟಿಸ್ ಕಳುಹಿಸಿದ್ದ ಜೈಪುರದ ಶಾಲೆಯೊಂದು, ‘ಪ್ರೀತಿಯ ಪೋಷಕರೇ, ಮೊಟ್ಟೆಗಳು ಸೇರಿದಂತೆ ಮಾಂಸಾಹಾರದ ಖಾದ್ಯಗಳನ್ನು ವಿದ್ಯಾರ್ಥಿಗಳು ಶಾಲೆಗೆ ತರಲು ಅವಕಾಶವಿಲ್ಲ’ ಎಂದು ಹೇಳಿತ್ತು. ಈ ಸಂದೇಶವನ್ನು ತಮ್ಮ ಕುಟುಂಬದವರಿಗೂ ಈ ಸಂದೇಶ ಬಂದಿದೆ ಎಂದು ಕಥೆಗಾರ ಮತ್ತು ಸಾಹಿತಿ ದರಾಬ್ ಫಾರೂಕಿ ಎಂಬುವರು ‘ಎಕ್ಸ್’ನಲ್ಲಿ ಆರೋಪಿಸಿದ್ದರು.
ವಿದ್ಯಾರ್ಥಿಗಳು ಶಾಲೆಗೆ ಮೊಟ್ಟೆಯನ್ನು ತರಲು ಅವಕಾಶವಿಲ್ಲದ ನೀತಿಯನ್ನು ಶಾಲೆ ಅಳವಡಿಸಿಕೊಳ್ಳಬಹುದೇ ಎಂದು ಪ್ರಶ್ನಿಸಿದ್ದ ಫಾರೂಕಿ, ಮೊಟ್ಟೆ, ಕೋಳಿಮಾಂಸ ಸೇರಿದಂತೆ ಇನ್ನಿತರ ಮಾಂಸಾಹಾರಗಳು ಮಕ್ಕಳನ್ನು ಬಲಶಾಲಿಯಾಗಿಸುತ್ತವೆ ಎಂದು ಪ್ರತಿಪಾದಿಸಿದ್ದರು.
ಆದರೆ, ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಲೆಯ ಪ್ರಾಂಶುಪಾಲರಾದ ಜ್ಯೋತಿ ಜೋಶಿ, ‘ಇಂಥ ಯಾವುದೇ ನೋಟಿಸ್ ಅನ್ನು ಕಳುಹಿಸಿಲ್ಲ. ಆದರೂ, ಈ ಬಗ್ಗೆ ‘ಎಕ್ಸ್’ ವೇದಿಕೆಯಲ್ಲಿ ಚರ್ಚಿಸಲಾಗುತ್ತಿದೆ. ಚರ್ಚಿಸಲು ಇದಕ್ಕಿಂತಲೂ ಹೆಚ್ಚು ಮುಖ್ಯವಾದ ವಿಷಯಗಳಿವೆ. ಆದರೆ, ಟಿಫಿನ್ ಬಾಕ್ಸ್‌ನಲ್ಲಿ ಮಾಂಸಾಹಾರದ ಪದಾರ್ಥಗಳು ಹಳಸುವ ಕಾರಣ, ಅದು ತಿನ್ನಲು ಯೋಗ್ಯವಾಗಿರುವುದಿಲ್ಲ. ನಾನು ವಿಜ್ಞಾನದ ಹಿನ್ನೆಲೆಯಿಂದ ಬಂದಿರುವುದರಿಂದ ಈ ಬಗ್ಗೆ ಚೆನ್ನಾಗಿ ತಿಳಿದಿದೆ. ವಾತಾವರಣವೂ ಬಿಸಿಯಾಗಿದೆ’ ಎಂದಿದ್ದಾರೆ.
2018ರಲ್ಲಿ ಹೈದರಾಬಾದ್‌ನಲ್ಲಿರುವ ಶಾಲೆಯೊಂದು ವಿದ್ಯಾರ್ಥಿಗಳು ಟಿಫಿನ್‌ನಲ್ಲಿ ಮಾಂಸಾಹಾರದ ಖಾದ್ಯ ತರುವುದನ್ನು ನಿಷೇಧಿಸಿತ್ತು.
ಮೊಟ್ಟೆಗಳು ಮಕ್ಕಳಿಗೆ ಉಪಯುಕ್ತವಾಗಿರುವ ಹಲವು ಪ್ರೋಟಿನ್‌ಗಳ ಮೂಲವಾಗಿರುವ ಹೊರತಾಗಿಯೂ, ಬಿಜೆಪಿ ಆಡಳಿತವಿರುವ ಬಹುತೇಕ ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲಾಗುತ್ತಿಲ್ಲ. ಹಿಮಾಚಲಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದ ಸರ್ಕಾರಗಳು ಮಕ್ಕಳಿಗೆ ಮೊಟ್ಟೆಯನ್ನು ನೀಡುತ್ತಿಲ್ಲ. ಆದರೆ, ಒಡಿಶಾ, ತಮಿಳುನಾಡು, ಉತ್ತರಾಖಂಡ, ತೆಲಂಗಾಣ ಸರ್ಕಾರಗಳು ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ನೀಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.