ನವದೆಹಲಿ: ಇತ್ತೀಚೆಗೆಷ್ಟೇ ಕಾಂಗ್ರೆಸ್ ತೊರೆದಿರುವ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹಾಗೂ ಪಕ್ಷದ ಇತರ ಮುಖಂಡರ ನಡುವಿನ ವಾಕ್ಸಮರ ಮುಂದುವರಿದಿದೆ.
ಆಜಾದ್ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಜೈರಾಂ ರಮೇಶ್, ‘ಮೋದಿ ಸರ್ಕಾರ ದೆಹಲಿಯಲ್ಲಿ ಒದಗಿಸಿರುವ ಬಂಗಲೆಯ ವಿಶಾಲ ಹಸಿರು ಹಾಸಿನ ಮೇಲೆ ಕುಳಿತು ಸುಳ್ಳು ಹಬ್ಬಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ಜಮ್ಮು–ಕಾಶ್ಮೀರದ ಭಲೆಸ್ಸಾದಲ್ಲಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕರ ಸಭೆ ನಡೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನ್ನು ಉಲ್ಲೇಖಿಸಿರುವ ಜೈರಾಂ ರಮೇಶ್, ‘ಇದು ವಾಸ್ತವ. ನವದೆಹಲಿಯಲ್ಲಿ ಮೋದಿ ನೇತೃತ್ವದ ಸರ್ಕಾರ ನೀಡಿರುವ ಬಂಗ್ಲೆಯಲ್ಲಿ ಕುಳಿತವರು ಸೃಷ್ಟಿಸಿರುವ ಸುಳ್ಳು ಸುದ್ದಿಯಲ್ಲ’ ಎಂದಿದ್ದಾರೆ.
ಭಲೆಸ್ಸಾ, ಆಜಾದ್ ಅವರ ತವರು. ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯ ವಿಡಿಯೊವೊಂದನ್ನು ಕಾಂಗ್ರೆಸ್‌ನ ಜಮ್ಮು–ಕಾಶ್ಮೀರದ ಮುಖಂಡರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಗಂದೋಹದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಭಲೆಸ್ಸಾ ಉಪವಿಭಾಗದ ಎಲ್ಲ ಬ್ಲಾಕ್‌ಗಳ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಕಳೆದ 50 ವರ್ಷಗಳಿಂದ ಪ್ರತಿ ತಿಂಗಳ ಮೊದಲನೇ ದಿನ ಈ ಸಭೆಯನ್ನು ಆಯೋಜಿಸಲಾಗುತ್ತದೆ’ ಎಂಬ ಸಾಲುಗಳು ವಿಡಿಯೊದೊಂದಿಗೆ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.