ADVERTISEMENT

ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಮಸೂದ್ ಅಜರ್ ಸಂಬಂಧಿ ಸೇರಿ ಮೂವರು ಉಗ್ರರ ಹತ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2020, 11:44 IST
Last Updated 3 ಜೂನ್ 2020, 11:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಪಾಕಿಸ್ತಾನಿ ಮೂಲದ ಜೈಷ್‌–ಇ–ಮೊಹಮ್ಮದ್ ‌(ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸಂಬಂಧಿಕ ಸೇರಿದಂತೆ ಮೂವರು ಉಗ್ರರನ್ನು ಕಾಶ್ಮೀರದ ದಕ್ಷಿಣ ಪುಲ್ವಾಮದಲ್ಲಿ ಭದ್ರತಾಪಡೆಗಳು ಬುಧವಾರ ಹತ್ಯೆ ಮಾಡಿವೆ.

ಹತ್ಯೆಗೀಡಾದ ಉಗ್ರರಲ್ಲಿ ಒಬ್ಬನಾದ ಇಸ್ಮಾಯಿಲ್ ಅಲಿಯಾಸ್ ಫೌಜಿ ಭಾಯಿ ಜೆಇಎಂ ಮುಖ್ಯಸ್ಥ ಮಸೂದ್‌ಗೆ ನಿಕಟ ಸಂಬಂಧಿ ಹಾಗೂ ಉಗ್ರ ಸಂಘಟನೆಯ ಕಾಶ್ಮೀರದ ಕಮಾಂಡರ್ ಆಗಿದ್ದ. ಪುಲ್ವಾಮದಲ್ಲಿ ಇತ್ತೀಚೆಗೆ ಭದ್ರತಾಪಡೆಗಳ ಮೇಲೆ ಕಾರ್ ಬಾಂಬ್ ದಾಳಿ ನಡೆಸಲು ರೂಪಿಸಿದ ಸಂಚಿನಲ್ಲಿ ಈತನೂ ಶಾಮೀಲಾಗಿದ್ದ ಎನ್ನಲಾಗಿದೆ.

2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯಲ್ಲಿಯೂ ಈತ ಶಾಮೀಲಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆ ದಾಳಿಯಲ್ಲಿ 40 ಮಂದಿ ಸಿಆರ್‌ಎಫ್‌ ಯೋಧರು ಹುತಾತ್ಮ ರಾಗಿದ್ದರು.

ADVERTISEMENT

ಮಸೂದ್ ಅಜರ್‌ನ ಮತ್ತೊಬ್ಬ ನಿಕಟ ಸಂಬಂಧಿ ತಲ್ಹಾ ರಶೀದ್ ಎಂಬಾತನನ್ನು 2017 ನವೆಂಬರ್‌ನಲ್ಲಿ ಭದ್ರತಾಪಡೆಗಳು ಹತ್ಯೆ ಮಾಡಿದ್ದವು. ಅದಾದ ನಂತರ 2018ರ ಆರಂಭದಲ್ಲಿ ಇಸ್ಮಾಯಿಲ್‌ನನ್ನು ಕಾಶ್ಮೀರಕ್ಕೆ ಕಳುಹಿಸಿಕೊಡಲಾಗಿತ್ತು. ಈ ವರ್ಷ ಜನವರಿಯಲ್ಲಿ ಉಗ್ರ ಸಂಘಟನೆಯ ಕಾಶ್ಮೀರ ಕಮಾಂಡರ್ ಖ್ವಾರಿ ಮುಫ್ತಿ ಯಾಸಿರ್‌ನನ್ನು ಭದ್ರತಾಪಡೆಗಳು ಹತ್ಯೆ ಮಾಡಿದ್ದವು. ಅದಾದ ಬಳಿಕ ಇಸ್ಮಾಯಿಲ್ ಕಮಾಂಡರ್ ಆಗಿ ನಿಯುಕ್ತಿಗೊಂಡಿದ್ದ ಎನ್ನಲಾಗಿದೆ.

ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ 55ರ ಸಿಬ್ಬಂದಿ ಮತ್ತು ಜಮ್ಮು–ಕಾಶ್ಮೀರ ಪೊಲೀಸರು ಜಂಟಿಯಾಗಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ, ಪುಲ್ವಾಮಾದ ಕಂಗನ್ ಪ್ರದೇಶದ ಅಸ್ಟನ್ ಮೊಹಲ್ಲಾದಲ್ಲಿ ಎನ್‌ಕೌಂಟರ್ ನಡೆದಿದೆ.

ಕಳೆದ ವರ್ಷ ಫೆಬ್ರುವರಿಯಲ್ಲಿ ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ನಡೆಸಿದ ರೀತಿಯಲ್ಲೇ ಮತ್ತೊಂದು ದಾಳಿ ನಡೆಸಲು ಇತ್ತೀಚೆಗೆ ಉಗ್ರರು ವಿಫಲ ಯತ್ನ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.