ADVERTISEMENT

ಪುಲ್ವಾಮಾ ದಾಳಿ: 40 ಯೋಧರ ಹತ್ಯೆಗೆ ಉಗ್ರ ಸಂಘಟನೆ ವ್ಯಯಿಸಿದ್ದು ₹ 5.7 ಲಕ್ಷ

ಏಜೆನ್ಸೀಸ್
Published 27 ಆಗಸ್ಟ್ 2020, 11:37 IST
Last Updated 27 ಆಗಸ್ಟ್ 2020, 11:37 IST
ಪುಲ್ವಾಮಾ ದಾಳಿ ಚಿತ್ರ
ಪುಲ್ವಾಮಾ ದಾಳಿ ಚಿತ್ರ   

ನವದೆಹಲಿ: ನಿಷೇಧಿತ ಜೈಷ್–ಇ–ಮೊಹಮ್ಮದ್ ಉಗ್ರ ಸಂಘಟನೆಯು ಪುಲ್ವಾಮಾ ದಾಳಿಗೆ ಸುಮಾರು ₹ 5.7ಲಕ್ಷ ವೆಚ್ಚ ಮಾಡಿತ್ತು. ಈ ಮೊತ್ತದಲ್ಲಿ ವ್ಯಾನ್‌ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಖರೀದಿ ಮಾಡಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರುವರಿ 14ರಂದು ಜೈಷ್–ಇ–ಮೊಹಮ್ಮದ್ ಉಗ್ರ ಸಂಘಟನೆ ಆತ್ಮಹತ್ಯಾ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 40 ಯೋಧರು ಮೃತಪಟ್ಟಿದ್ದರು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈ ದಾಳಿ ಪ್ರಕರಣದ ತನಿಖೆ ನಡೆಸಿತ್ತು. ಬುಧವಾರ ಜಮ್ಮುವಿನ ವಿಶೇಷ ಕೋರ್ಟ್‌ನಲ್ಲಿ ಜೈಷ್–ಇ–ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ 19 ಜನರ ವಿರುದ್ಧ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ. ಒಟ್ಟು 13,500 ಪುಟಗಳ ದೋಷಾರೋಪ ಪಟ್ಟಿಯನ್ನು ದಾಖಲಿಸಲಾಗಿದೆ.

ಈ ದಾಳಿಯ ರೂವಾರಿ ಉಗ್ರ ಮಸೂದ್ ಅಜರ್ ಅಳಿಯ ಉಮರ್‌ ಫಾರೂಕ್‌ ಎಲ್ಲಾ ಖರ್ಚು ವೆಚ್ಚಗಳನ್ನು ನೋಡುಕೊಂಡಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.

ದಾಳಿಗೆ ಬಳಕೆ ಮಾಡಿದ್ದ ಮಾರುತಿ ಇಕೋ ವ್ಯಾನ್‌ ಅನ್ನು ₹ 1.85ಕ್ಕೆ ಖರೀದಿ ಮಾಡಲಾಗಿತ್ತು. ಇದರಲ್ಲಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುವ ಸಲುವಾಗಿ ₹ 35 ಸಾವಿರ ಖರ್ಚು ಮಾಡಿ ವ್ಯಾನ್‌ ಅನ್ನು ಮಾರ್ಪಾಡು ಮಾಡಲಾಗಿತ್ತು. ₹ 2.25 ಲಕ್ಷಕ್ಕೆ ಎರಡು ಐಇಡಿ (ಸುಧಾರಿತ ಸ್ಫೋಟಕ ಸಾಮಗ್ರಿ) ಹಾಗೂ ಆನ್‌ಲೈನ್‌ ಮೂಲಕ ₹ 30 ಸಾವಿರ ಮೌಲ್ಯದ ಅಲ್ಯೂಮಿನಿಯಂ ಖರೀದಿ ಮಾಡಲಾಗಿತ್ತು. ಇತರೆ ವೆಚ್ಚಗಳಿಗೆ ₹ 32 ಸಾವಿರವ್ಯಯಿಸಲಾಗಿತ್ತು. ಈ ದಾಳಿಗೆ ₹ 5.7ಲಕ್ಷ ಖರ್ಚು ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿದೆ.

2019ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಉಮರ್‌ ಫಾರೂಕ್‌ ಬ್ಯಾಂಕ್‌ ಖಾತೆಗೆ ಪಾಕಿಸ್ತಾನದ ಅಲೈದ್‌ ಹಾಗೂ ಮೀಜಾದ್‌ ಬ್ಯಾಂಕಿನಿಂದ ₹ 10 ಲಕ್ಷ ರೂಪಾಯಿ ಸಂದಾಯವಾಗಿರುವುದನ್ನು ಎನ್ಐಎ ಪತ್ತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.