ನವದೆಹಲಿ:ಭಾರತೀಯ ಯುದ್ಧನೌಕೆಗಳ ಮೇಲೆ ದಾಳಿ ನಡೆಸಲು ಜೈಷೆ–ಇ–ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಆಳ ಸಮುದ್ರದ ಈಜು(‘ಡೀಪ್ ಸೀ ಡೈವಿಂಗ್’) ತರಬೇತಿ ಪಡೆಯುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ನೌಕಾಪಡೆ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಭಾರತದ ಗುಪ್ತಚರ ಇಲಾಖೆ ಹಲವು ಭದ್ರತಾ ಸಂಸ್ಥೆಗಳ ಜತೆಗೂಡಿ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಜೈಷೆ–ಇ–ಮೊಹಮ್ಮದ್ ಸಂಘಟನೆ ಪ್ರಸ್ತುತ ಪಾಕಿಸ್ತಾನದ ಬಹಾವಾಲ್ಪುರದಲ್ಲಿ ಆಳವಾದ ಸಮುದ್ರ ಈಜಿನ ತಂತ್ರಗಾರಿಕೆ ಪಡೆದಿದೆ ಮತ್ತು ನೌಕಾಪಡೆಯ ಆಯಕಟ್ಟಿನ ಸ್ವತ್ತುಗಳನ್ನು ಗುರಿಯಾಗಿರಿಸಲು ಯೋಜಿಸುತ್ತಿದೆ ಎಂದು ಹೇಳಿದೆ.
ಭಾರತೀಯ ನೌಕಾಪಡೆಯ ಆಯಕಟ್ಟಿನ ಸ್ವತ್ತುಗಳಿಗೆ ಬೆದರಿಕೆಯೊಡ್ಡುವ ಕಾರ್ಯತಂತ್ರವನ್ನು ರೂಪಿಸಲಾಗಿದೆಯೇ ಎಂಬುದು ಅಸ್ಪಷ್ಟವಾಗಿದೆ. ಐಎನ್‌ಎಸ್ ಅರಿಹಂತ್, ಐಎನ್‌ಎಸ್ ಅರಿಘಾತ್, ಐಎನ್‌ಎಸ್ ಚಕ್ರ ಸೇರಿದಂತೆ ಪರಮಾಣು ಸಿಡಿತಲೆ ಕ್ಷಿಪಣಿ ಉಡಾವಣೆ ಸಾಮರ್ಥ್ಯದ ಜಲಾಂತರ್ಗಾಮಿ ನೌಕೆಗಳು ವಿಶಾಖಪಟ್ಟಣದಲ್ಲಿ ಬೀಡುಬಿಟ್ಟಿವೆ.
ನಿರ್ದಿಷ್ಟ ಬೆದರಿಕೆ ಮತ್ತು ಈ ಸಂಬಂಧ ನೌಕಾ ನೆಲೆಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿದ್ದಾಗಿ ಎನ್‌ಡಿ ಟಿ.ವಿ ವರದಿ ಮಾಡಿದೆ.
ಭಾರತೀಯ ನೌಕಾಪಡೆಯ ನೆಲೆಗಳು ಮತ್ತು ಬಂದರುಗಳಲ್ಲಿ ಹಲವು ಸುತ್ತಿನ ಭದ್ರತಾ ಜಾಲವಿದೆ. ಅದರಲ್ಲೂ ವಿಶೇಷವಾಗಿ ಆಳ ಸಮುದ್ರ ಡೈವರ್‌ಗಳನ್ನು ಪತ್ತೆಹಚ್ಚಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಜಲಾಂತರ ಶಬ್ದಶೋಧಕ(ಸೋನಾರ್) ವ್ಯವಸ್ಥೆಯನ್ನು ಅಳವಡಿಸಿದೆ. ನೌಕೆಗಳಿಗೆ ಬೆದರಿಕೆಗಳು ಬಂದಾಗ ನೌಕೆಗಳು ಬಂದರುಗಳಲ್ಲಿ ಅಥವಾ ಸಮುದ್ರದಲ್ಲಿ ಲಂಗರು ಹಾಕುತ್ತವೆ. ಹೆಚ್ಚಿನ ಭದ್ರತಾ ವ್ಯವಸ್ಥೆ ಇರುವಲ್ಲಿ ದಾಳಿ ನಡೆಸಲು ಸಾಧ್ಯವಿಲ್ಲ ಎಂದು ನೌಕಾಪಡೆಯ ಮೂಲಗಳು ತಿಳಿಸಿದ್ದಾಗಿ ವರದಿ ಮಾಡಿದೆ.
2000ದಲ್ಲಿ ಯೆಮೆನ್‌ನ ಅಡೆನ್‌ನಲ್ಲಿ ಅಮೆರಿದ ನೌಕೆಗೆ ಇಂಧನ ತುಂಬುವ ವೇಳೆ ಆಲ್ ಖೈದಾ ಭಯೋತ್ಪಾದಕರು ನೌಕೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಮೆರಿಕದ 17 ನಾವಿಕರು ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.