ನವದೆಹಲಿ: ಬಾಂಗ್ಲಾದೇಶದಲ್ಲಿ ಸೃಷ್ಟಿಯಾದ ಅರಾಜಕತೆ ಕುರಿತು ವಿವರಿಸಲು ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಈ ವೇಳೆ ಸಭೆಗೆ ಎಲ್ಲಾ ಪಕ್ಷಗಳು ಒಮ್ಮತದ ಬೆಂಬಲ ನೀಡಿದ್ದಕ್ಕೆ ಶ್ಲಾಘಿಸಿದರು.
ಈ ಕುರಿತು ಎಕ್ಸ್‌ನಲ್ಲಿ ಪೋಟೊ ಹಂಚಿಕೊಂಡಿರುವ ಜೈಶಂಕರ್, ‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇಂದು ಸಂಸತ್ತಿನಲ್ಲಿ ನಡೆದ ಸರ್ವಪಕ್ಷ ಸಭೆಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಎಲ್ಲಾ ಪಕ್ಷಗಳು ಒಮ್ಮತದ ಬೆಂಬಲ ನೀಡಿದ್ದಕ್ಕೆ ಶ್ಲಾಘಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ’.
‘ಸದ್ಯ ಶೇಖ್ ಹಸೀನಾ ಅವರು ಭಾರತದಲ್ಲಿದ್ದಾರೆ. ಅವರ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಭಾರತ ಸರ್ಕಾರ ಅವರಿಗೆ ಸಮಯ ನೀಡಲಿದೆ’ ಎಂದು ಜೈಶಂಕರ್ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಕೇಂದ್ರ ಸರ್ಕಾರ ಬಾಂಗ್ಲಾದೇಶದ ಸೇನೆಯೊಂದಿಗೆ ಸಂಪರ್ಕದಲ್ಲಿದೆ. ಸರಿಯಾದ ಸಮಯದಲ್ಲಿ ಸೇನೆ ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿರುವುದಾಗಿ ಸಭೆಯಲ್ಲಿ ಜೈಶಂಕರ್ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ತಿಳಿಸಿದೆ.
ಬಾಂಗ್ಲಾದೇಶದಲ್ಲಿ 20 ಸಾವಿರ ಭಾರತೀಯರಿದ್ದಾರೆ ಅವರಲ್ಲಿ 8 ಸಾವಿರ ಭಾರತೀಯರು ವಾಪಸ್ಸಾಗಿದ್ದಾರೆ ಎಂದ ವಿಪಕ್ಷಗಳ ಹೇಳಿಕೆಗೆ, ‘ಭಾರತ ಸರ್ಕಾರ ಬಾಂಗ್ಲಾದಲ್ಲಿರುವ ಭಾರತೀಯರು ಮತ್ತು ಹೈಕಮಿಷನ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ದೀರ್ಘಕಾಲದ ಮತ್ತು ತ್ವರಿತ ತಂತ್ರಗಳ ಬಗ್ಗೆ ಏನು ಕ್ರಮವಹಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ‘ಇದು ಬೆಳವಣಿಯಾಗುತ್ತಿರುವ ಸಂದರ್ಭವಾಗಿದೆ. ಹೀಗಾಗಿ ವಿಶ್ಲೇಷಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಸಭೆಯಲ್ಲಿ ಜೈಶಂಕರ್ ಸೇರಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜು ಖರ್ಗೆ, ಕೆ.ಸಿ. ವೇಣುಗೋಪಾಲ್, ಗೃಹ ಸಚಿವ ಅಮಿತ್ ಶಾ, ಕಿರಣ್ ರಿಜಿಜು, ರಾಜನಾಥ ಸಿಂಗ್, ಜಿ.ಪಿ.ನಡ್ಡಾ ಸೇರಿ ಹಲವು ನಾಯಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.