ನವದೆಹಲಿ: ಭಾರತದೊಂದಿಗಿನ ಬಾಂಧವ್ಯಸುದೃಢವಾಗಿಸಲು ಪಾಕಿಸ್ತಾನ ಮೊದಲು ಅವರ ದೇಶದಲ್ಲಿರುವ ಭಯೋತ್ಪಾದನೆಯನ್ನು ಮಟ್ಟಹಾಕಬೇಕು ಮತ್ತು ಭಾರತದೊಂದಿಗೆ ಸಹಕರಿಸಲು ನಿಜವಾದ ಇಚ್ಛೆ ವ್ಯಕ್ತಪಡಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಫ್ರೆಂಚ್ ಸುದ್ದಿಪತ್ರಿಕೆ ಲೆ ಮೊಂಡೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೈ ಶಂಕರ್, ಚೀನಾದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದ್ದು ಜಗತ್ತಿನ ಇತರ ರಾಷ್ಟ್ರಗಳೊಂದಿಗೂ ಇದನ್ನೇ ಬಯಸುತ್ತಿದೆ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ದೃಢವಾಗಿಲ್ಲ ಎಂದು ಪಾಕಿಸ್ತಾನದ ವಿದೇಶ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಜೈಶಂಕರ್, ಪಾಕಿಸ್ತಾನವು ಉಗ್ರರ ಉದ್ಯಮವನ್ನೇ ಬೆಳೆಸಿದೆ. ಭಾರತದಲ್ಲಿ ದಾಳಿ ನಡೆಸಲು ಅವರು ಉಗ್ರರನ್ನು ಕಳುಹಿಸುತ್ತಾರೆ. ಇದನ್ನು ಪಾಕಿಸ್ತಾನವೂ ನಿರಾಕರಿಸುವುದಿಲ್ಲ. ಭಯೋತ್ಪಾದನಾ ಕೃತ್ಯಗಳನ್ನು ಮುಕ್ತವಾಗಿ ಮಾಡುತ್ತಿರುವ ರಾಷ್ಟ್ರದೊಂದಿಗೆ ಯಾವ ರಾಷ್ಟ್ರ ಮಾತುಕತೆ ನಡೆಸಲು ಸಿದ್ಧವಾಗಿರುತ್ತದೆ ಎಂದು ನೀವೇ ಹೇಳಿ ನೋಡೋಣ ಎಂದಿದ್ದಾರೆ.
ಹಲವಾರು ವರ್ಷಗಳಿಂದ ಅವರೊಂದಿಗಿನ ಬಾಂಧವ್ಯ ಸರಿ ಇಲ್ಲ. ಸಹಕಾರಕ್ಕಾಗಿ ನಿಜವಾದ ಇಚ್ಛೆಯನ್ನು ಅವರು ವ್ಯಕ್ತಪಡಿಸಬೇಕು. ಉದಾಹರಣೆಗೆ ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯರು ಉಗ್ರ ಕೃತ್ಯಗಳನ್ನು ನಡೆಸಲು ಬಯಸುತ್ತಾರೆ. ಅಂತವರನ್ನು ನಮಗೊಪ್ಪಿಸಿ ಎಂದು ನಾವು ಪಾಕಿಸ್ತಾನದವರಲ್ಲಿ ಕೇಳುತ್ತಿದ್ದೇವೆ ಎಂದಿದ್ದಾರೆ ಜೈಶಂಕರ್.
ಚೀನಾ- ಭಾರತದ ಬಾಂಧವ್ಯದ ಬಗ್ಗೆ ಮಾತನಾಡಿದ ಜೈಶಂಕರ್, ನಮ್ಮ ನಡುವೆ ಸಮಾನವಾದ ವೈಶಿಷ್ಟ್ಯಗಳಿವೆ ಯಾಕೆಂದರೆ ಜಗತ್ತನ್ನು ಮತ್ತೆ ಸರಿದೂಗಿಸಲು ಏಷ್ಯಾದ ಎರಡು ಬೃಹತ್ ರಾಷ್ಟ್ರಗಳು ಸರಿದೂಗಬೇಕಿದೆ. ನಾವು ವಿಭಿನ್ನ ಆಳ್ವಿಕೆ, ಸಂಪ್ರದಾಯವನ್ನು ಹೊಂದಿದ್ದರೂ ನಮ್ಮ ಆಸಕ್ತಿಯನ್ನು ಕಾಪಾಡಲುನಮ್ಮ ನಡುವೆ ಸಮಾನ ಆಸಕ್ತಿಗಳಿವೆ. ಈ ಎರಡೂ ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿದೆ. ಭಾರತ ಮತ್ತು ಚೀನಾ ಜಾಗತಿಕ ಮಟ್ಟದ ಚರ್ಚೆಯಲ್ಲಿ ಆಸಕ್ತಿವಹಿಸಿದೆ.
ಈಗಿನ ಜಗತ್ತು ಸಹಕಾರ ಮತ್ತು ಪೈಪೋಟಿಯನ್ನು ಸರಿದೂಗಿಸಿಕೊಂಡು ಹೋಗುತ್ತಿದೆ. ಚೀನಾ ಮತ್ತು ಭಾರತ ನಡುವೆ ಸಂಬಂಧ ಗಟ್ಟಿಯಾಗಲು ಸಮಾನ ಆಸಕ್ತಿಯೇ ಕಾರಣ ಎಂದು ಸಚಿವರು ಹೇಳಿದ್ದಾರೆ,
ಅದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಲಾದ ನಿರ್ಬಂಧ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿರ್ಬಂಧಗಳನ್ನು ಕ್ರಮೇಣ ಸಡಿಲ ಮಾಡಲಾಗುವುದು. ಟೆಲಿಫೋನ್ ಮತ್ತು ಮೊಬೈಲ್ ಸಂಪರ್ಕ ಪುನಾರಂಭವಾಗಿದೆ. ಅಂಗಡಿಗಳು ತೆರೆದಿವೆ ಮತ್ತು ಸೇಬು ಕೃಷಿ ಆರಂಭವಾಗುತ್ತಿದ್ದು ಅಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದೆ. ಅಲ್ಲಿನ ಪ್ರದೇಶಗಳು ಸುರಕ್ಷಿತವಾಗಿರುವುದರಿಂದ ವಿದೇಶಿ ಪತ್ರಕರ್ತರಿಗೆ ಅಲ್ಲಿಗೆ ಹೋಗಲು ಅನುಮತಿ ನೀಡಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.