ADVERTISEMENT

ಮತ ಚಲಾಯಿಸುವ ಮುನ್ನ 'ದ್ರೋಹದಲ್ಲೇ ಕಳೆದುಹೋದ ದಿನಗಳನ್ನು ನೆನೆಯಿರಿ': ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2024, 6:11 IST
Last Updated 25 ಸೆಪ್ಟೆಂಬರ್ 2024, 6:11 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, 'ದ್ರೋಹದಲ್ಲೇ ಕಳೆದುಹೋಗಿರುವ ದಿನಗಳನ್ನು ನೆನಪಿಸಿಕೊಳ್ಳಿ' ಎಂದು ಮತದಾರರಿಗೆ ಕರೆ ನೀಡಿದ್ದಾರೆ.

90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್‌ 18ರಂದು ಮೊದಲ ಹಂತದಲ್ಲಿ 24 ಕ್ಷೇತ್ರಗಳಿಗೆ ಮತದಾನವಾಗಿದೆ.

ಇಂದು ಬೆಳಿಗ್ಗೆ 7ಕ್ಕೆ 2ನೇ ಹಂತದ ಮತದಾನ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಸೇರಿದಂತೆ 239 ಅಭ್ಯರ್ಥಿಗಳು ಕಣದಲ್ಲಿದ್ದು, 25 ಲಕ್ಷ ಅರ್ಹ ಮತದಾರರು ಭವಿಷ್ಯ ನಿರ್ಧರಿಸಲಿದ್ದಾರೆ.

ADVERTISEMENT

ಅಕ್ಟೋಬರ್‌ 1ರಂದು 40 ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಮತದಾನವಾಗಲಿದೆ. ಅಕ್ಟೋಬರ್‌ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆ ನಿಮಿತ್ತ ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಖರ್ಗೆ, 'ಇಂದು 2ನೇ ಹಂತದಲ್ಲಿ 26 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸುವಂತೆ ಜಮ್ಮು ಮತ್ತು ಕಾಶ್ಮೀರದ ಜನರನ್ನು ಒತ್ತಾಯಿಸುತ್ತೇನೆ' ಎಂದು ಕೋರಿದ್ದಾರೆ.

ಮುಂದುವರಿದು, 'ಇವಿಎಂನಲ್ಲಿ (ವಿದ್ಯುನ್ಮಾನ ಮತಯಂತ್ರದಲ್ಲಿ) ಮತ ಚಲಾಯಿಸುವ ಮುನ್ನ, ನಿಮ್ಮ ಒಂದು ದಶಕವು ದ್ರೋಹದಿಂದ ಹೇಗೆ ಕಳೆದುಹೋಯಿತು ಎಂಬುದನ್ನು ನೆನಪಿಸಿಕೊಳ್ಳಿ. ಇತಿಹಾಸದಲ್ಲೇ ಮೊದಲ ಸಲ ರಾಜ್ಯದ ಸ್ಥಾನಮಾನವನ್ನು ಕೇಂದ್ರಾಡಳಿತ ಪ್ರದೇಶವಾಗಿ ಹೇಗೆ ಕೆಳದರ್ಜೆಗೆ ಇಳಿಸಲಾಯಿತು ಎಂಬುದರ ಬಗ್ಗೆ ಆಲೋಚಿಸಿ. ಭೂಮಿಯ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಸಮಸ್ಯೆಗಳು ಹೇಗೆ ಉಲ್ಬಣಿಸುತ್ತಿವೆ ಎಂಬುದನ್ನು ಚಿಂತಿಸಿ' ಎಂದು ಕರೆ ನೀಡಿದ್ದಾರೆ.

ಧನಾತ್ಮಕ ಬದಲಾವಣೆಗಾಗಿನ ಮತವು ಜನರ ಭವಿಷ್ಯ ಮತ್ತು ಕಲ್ಯಾಣಕ್ಕೆ ಖಾತ್ರಿಯಾಗಲಿದೆ ಎಂದು ಕಿವಿಮಾತು  ಹೇಳಿರುವ ಅವರು, 'ಪ್ರತಿಯೊಂದು ಮತವೂ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲಿದೆ. ಭವಿಷ್ಯದತ್ತ ನೋಡುತ್ತಿರುವ ಮೊದಲ ಬಾರಿಯ ಮತದಾರರನ್ನು ಆದರದಿಂದ ಸ್ವಾಗತಿಸುತ್ತೇನೆ' ಎಂದಿದ್ದಾರೆ.

'ಈ ಚುನಾವಣೆಯು ಜಮ್ಮು ಮತ್ತು ಕಾಶ್ಮೀರದ ಪಾಲಿಗೆ ತಿರುವು ನೀಡಲಿದೆ. ಪ್ರಜಾಸತ್ತಾತ್ಮಕ ಹಕ್ಕನ್ನು ಬಳಸಿಕೊಂಡು ಬದಲಾವಣೆ ತನ್ನಿ' ಎಂದು ಒತ್ತಾಯಿಸಿದ್ದಾರೆ.

ಸಂವಿಧಾನದ 370 ವಿಧಿ ಅಡಿಯಲ್ಲಿ ಕಲ್ಪಿಸಲಾಗಿದ್ದ 'ವಿಶೇಷ ಸ್ಥಾನಮಾನ'ವನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ.

2019ರ ಆಗಸ್ಟ್ 5ರಂದು 'ವಿಶೇಷ ಸ್ಥಾನಮಾನ' ಹಿಂಪಡೆದಿದ್ದ ಕೇಂದ್ರ, ಅದೇ ದಿನ, ರಾಜ್ಯವನ್ನು ವಿಭಜಿಸಿತ್ತು. ಲಡಾಖ್, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳನ್ನು ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.